ಡೆಹ್ರಾಡೂನ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭೇಟಿ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸಿದ್ಧತೆ ವೇಳೆ ಕಬ್ಬಿಣ ಕತ್ತರಿಸುವ ಕಟ್ಟರ್ ತಲೆ ಮೇಲೆ ಬಿದ್ದು ಕಾಂಗ್ರೆಸ್ ಮುಖಂಡ ಅಮರ್ ಮೇಹ್ತಾ ಮೃತಪಟ್ಟಿದ್ದಾರೆ.
ಡೆಹ್ರಾಡೂನ್‌ನ ಶಾಲೆಯೊಂದರಲ್ಲಿ ಕಾರ್ಯಕ್ರಮದ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಮೇಲ್ಭಾಗದಿಂದ ಕಬ್ಬಿಣ ಕತ್ತರಿಸಲು ಬಳಸುವ ಕಟರ್ ಅವರ ತಲೆಯ ಮೇಲೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಾಹುಲ್ ಗಾಂಧಿ ಅವರ ಡೆಹ್ರಾಡೂನ್ ಪ್ರವಾಸದ ಅಂಗವಾಗಿ ಆಯೋಜಿಸಲಾಗಿದ್ದ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮದ ಸಿದ್ಧತೆಗಳು ಶಾಲೆಯಲ್ಲಿ ನಡೆಯುತ್ತಿದ್ದು, ಈ ಕಾರ್ಯಗಳ ಮೇಲ್ವಿಚಾರಣೆಗಾಗಿ ಅಮರ್ ಮೇಹ್ತಾ ಸ್ಥಳಕ್ಕೆ ಭೇಟಿ ನೀಡಿದ್ದರು.
ವೇದಿಕೆ ನಿರ್ಮಾಣ ಕಾರ್ಯವನ್ನು ಪರಿಶೀಲಿಸಲು ವೇದಿಕೆಯ ಕೆಳಭಾಗದಲ್ಲಿ ನಿಂತಿದ್ದ ವೇಳೆ ಮೇಲಿನಿಂದ ಕಬ್ಬಿಣ ಕತ್ತರಿಸುವ ಯಂತ್ರದ ಭಾಗ ಅವರ ತಲೆಯ ಮೇಲೆ ಬಿದ್ದಿದೆ ಎಂದು ವರದಿಯಾಗಿದೆ. ಸಂತಸದ ವಾತಾವರಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸಿದ್ಧತೆ ಕ್ಷಣಾರ್ಧದಲ್ಲೇ ದುರ್ಘಟನೆಯಾಗಿ ಪರಿಣಮಿಸಿದೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

0 Comments