ಬದಿಯಡ್ಕ: "ತುಳುನಾಡಿನ ಜನಪದ ನಂಬಿಕೆಯಂತೆ, ಆಟಿ ತಿಂಗಳ ಅಮಾವಾಸ್ಯೆಯಂದು ಸೂರ್ಯೋದಯಕ್ಕೂ ಮುನ್ನ ಪಾಲೆ ಮರದಲ್ಲಿ ನೂರಾರು ಸಾಂಪ್ರದಾಯಿಕ ಗಿಡಮೂಲಿಕೆಗಳ ಷಡ್ರಸಗಳು ಹಾಗೂ ಔಷಧೀಯ ಗುಣಗಳು ಬಂದು ಸೇರುತ್ತವೆ. ಹೀಗಾಗಿ, ಈ ದಿನದಂದು ಮುಂಜಾನೆ ಕಲ್ಲಿನಿಂದ ಜಜ್ಜಿ ತಂದ ಪಾಲೆ ಮರದ ಕೆತ್ತೆಗೆ ಕಲ್ಲುಪ್ಪು, ಜೀರಿಗೆ, ಓಮ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಕಷಾಯ ತಯಾರಿಸಲಾಗುತ್ತದೆ. ಈ ಕಷಾಯಕ್ಕೆ ಜೀರ್ಣಕ್ರಿಯೆ ಹೆಚ್ಚಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ತೀವ್ರ ಕಹಿ ಗುಣವಿರುತ್ತದೆ" ಎಂದು ಪ್ರಸಿದ್ಧ ವೈದ್ಯ ಡಾ| ಶ್ರೀನಿಧಿ ಸರಳಾಯ ಹೇಳಿದರು.
ಬದಿಯಡ್ಕದಲ್ಲಿರುವ ತನ್ನ ಶ್ರೀನಿಧಿ ಕ್ಲಿನಿಕ್‌ನಲ್ಲಿ ಆಟಿ ಅಮಾವಾಸ್ಯೆಯ ಅಂಗವಾಗಿ ಪಾಲೆ ಮರದ ಕೆತ್ತೆಯ ಕಷಾಯ ವಿತರಣೆಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ತುಳುವೆರೆ ಆಯೊನೊ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಈ ಸಂದರ್ಭದಲ್ಲಿ ಮಾತನಾಡಿ "ಆಯುರ್ವೇದದಲ್ಲಿ ಸಪ್ತಪರ್ಣಿ ಮರಕ್ಕೆ ಅಪಾರ ಔಷಧೀಯ ಪ್ರಾಮುಖ್ಯತೆಯಿದೆ. ಈ ಕೆತ್ತೆಯ ಕಷಾಯವು ದೇಹದ ಉಷ್ಣತೆಯನ್ನು ನಿಯಂತ್ರಿಸಲು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಹಾಗೂ ಮಳೆಗಾಲದಲ್ಲಿ ಬರುವ ಋತುಮಾನದ ಕಾಯಿಲೆಗಳನ್ನು ತಡೆಯಲು ನೆರವಾಗುತ್ತದೆ. ಪ್ರಕೃತಿಯೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿರುವ ಕರಾವಳಿಯ ಈ ಪಾರಂಪರಿಕ ಆಚರಣೆಯು ಸಂಸ್ಕೃತಿ, ಆಚಾರ ಮತ್ತು ಆರೋಗ್ಯ ನಂಬಿಕೆಗಳ ಅಪೂರ್ವ ಸಮ್ಮಿಲನವಾಗಿದೆ" ಎಂದರು. ಉಪ್ಲೇರಿ ಗುಳಿಗ ಸನ್ನಿಧಿಯ ರಕ್ಷಾಧಿಕಾರಿ ಜಗನ್ನಾಥ ರೈ ಕೊರೆಕ್ಕಾನ, ಸುಂದರ ಬಾರಡ್ಕ, ಡಾ. ಬೇ.ಸಿ. ಗೋಪಾಲಕೃಷ್ಣ ಭಟ್, ಕುಂಬ್ಡಾಜೆ ಗ್ರಾಮಪಂಚಾಯಿತಿ ಸದಸ್ಯೆ ನಯನ ಕಾನಕಜೆ, ರಾಘವೇಂದ್ರ ಅಮ್ಮಣ್ಣಾಯ, ಭಾಸ್ಕರ ಜೋಗಿ, ಪ್ರಸಾದ್ ಮೈರ್ಕಳ, ಶ್ರೀಶಾಂತ್ ಬದಿಯಡ್ಕ, ದೀಕ್ಷಿತ್ ಬಾರಡ್ಕ, ವಸಂತ ಬಾರಡ್ಕ ಸಹಕರಿಸಿದರು. ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪ್ರಾರ್ಥನೆ ಮಾಡಿದರು.
ಕಳೆದ ಅನೇಕ ವರ್ಷಗಳಿಂದ ಡಾ| ಶ್ರೀನಿಧಿ ಸರಳಾಯ ಅವರು ವಿಶೇಷ ಮುತುವರ್ಜಿಯಿಂದ ಆಟಿ ಅಮಾವಾಸ್ಯೆಯಂದು ಕಷಾಯ ವಿತರಿಸುತ್ತಿದ್ದಾರೆ. ಈ ಬಾರಿ 350ಕ್ಕೂ ಹೆಚ್ಚು ಮಂದಿ ಕಷಾಯ ಸ್ವೀಕರಿಸಿದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments