ಬೆಳ್ತಂಗಡಿ: ಗೇರುಕಟ್ಟೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಸುಮಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ತಿಂಗಳಿನಿಂದ ಕಗ್ಗಂಟಾಗಿರುವ ರಹಸ್ಯ ಭೇದಿಸಲು ಪೊಲೀಸ್ ಇಲಾಖೆ ಇದೀಗ ವೈಜ್ಞಾನಿಕ ತನಿಖೆಯ ಮೊರೆ ಹೋಗಿದೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣದಲ್ಲಿ ಸಂಶಯಾಸ್ಪದವಾಗಿರುವ ವ್ಯಕ್ತಿಗಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ದು ಮಂಪರು ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಲಾಗಿದೆ.
2026ರ ಜನವರಿ 14ರಂದು ಧನುಪೂಜೆಗಾಗಿ ದೇವಸ್ಥಾನಕ್ಕೆ ತೆರಳಿದ್ದ ಸುಮಂತ್ ಬಳಿಕ ಅನುಮಾನಾಸ್ಪದ ರೀತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದ. ಘಟನೆ ಕೊಲೆಯಾಗಿರಬಹುದು ಎಂಬ ಅನುಮಾನವನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ವ್ಯಕ್ತಪಡಿಸಿದ್ದರು. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದರೂ, ಆರು ತಿಂಗಳು ಕಳೆದರೂ ಸಾವಿನ ಹಿಂದಿನ ನಿಖರ ಕಾರಣ ಹಾಗೂ ಘಟನೆಯ ಕುರಿತಂತೆ ಸ್ಪಷ್ಟ ಸಾಕ್ಷ್ಯಗಳು ದೊರಕಿರಲಿಲ್ಲ.
ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ನೀಡಿರುವ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದ ತಂಡ ನ್ಯಾಯಾಲಯದ ಪೂರ್ವಾನುಮತಿ ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಆ.10ರಂದು ಸುಮಂತ್‌ನ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ ಹಾಗೂ ಸಹೋದರ ಸುದರ್ಶನ್ ಅವರನ್ನು ಬೆಂಗಳೂರಿನ ಎಫ್‌ಎಸ್‌ಎಲ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಬಳಿಕ ಆ.11ರಂದು ದೇವಸ್ಥಾನದ ಅರ್ಚಕ ರಾಧಾಕೃಷ್ಣ ಹಾಗೂ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮೀನಾರಾಯಣ ಅವರಿಂದಲೂ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ವ್ಯಕ್ತಿಗಳು ನೀಡಿರುವ ಹೇಳಿಕೆಗಳಲ್ಲಿನ ವ್ಯತ್ಯಾಸ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿಧಿವಿಜ್ಞಾನ ತಜ್ಞರು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಿದ್ದಾರೆ. ಮೊದಲ ಹಂತದ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ ಬಳಿಕ ಅದರಿಂದ ಲಭ್ಯವಾಗುವ ಸುಳಿವುಗಳನ್ನು ಆಧರಿಸಿ ತನಿಖೆಯನ್ನು ಮುಂದುವರಿಸಲು ತಂಡ ನಿರ್ಧರಿಸಿದೆ.
ಅಗತ್ಯವಿದ್ದಲ್ಲಿ ಮುಂದಿನ ಹಂತದಲ್ಲಿ ಪ್ರಕರಣದ ಇತರ ಶಂಕಿತ ವ್ಯಕ್ತಿಗಳನ್ನೂ ಇದೇ ರೀತಿಯ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ಪರೀಕ್ಷೆಗಳ ವರದಿಯಿಂದ ಸುಮಂತ್ ಸಾವಿನ ಹಿಂದಿನ ನಿಗೂಢತೆಗೆ ಉತ್ತರ ಸಿಗಬಹುದೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.

0 Comments