ಕಾಸರಗೋಡು: ಕಾಸರಗೋಡು ಮೀಪುಗುರಿ ನಿವಾಸಿಗಳಾದ ತಂದೆ ಮತ್ತು ಪುತ್ರಿಯ ಮೃತದೇಹಗಳು ಚೆಮ್ನಾಡು ಕೋಳಿಯಡ್ಕಂ ಶಿವಪುರ ಕ್ಷೇತ್ರದ ಸಮೀಪದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೀಪುಗುರಿ ನಿವಾಸಿ ಗಣೇಶನ್ (55) ಮತ್ತು ಅವರ ಪುತ್ರಿ ವೈಷ್ಣವಿ (17) ಮೃತಪಟ್ಟವರು. ವೈಷ್ಣವಿ ಪರವನಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದರು. ಶನಿವಾರ ರಾತ್ರಿ 11.10ರ ಸುಮಾರಿಗೆ ಮನೆಯ ಮಲಗುವ ಕೋಣೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾತ್ರಿ 10ರ ಸುಮಾರಿಗೆ ಗಣೇಶನ್ ಮನೆಯಿಂದ ಹೊರಬಂದು, ತಮ್ಮ ಪುತ್ರಿ ಕಾಣೆಯಾಗಿರುವುದಾಗಿ ನೆರೆಹೊರೆಯವರಲ್ಲಿ ತಿಳಿಸಿದ್ದರು. ಬಳಿಕ ಮನೆಗೆ ಮರಳಿ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಗಣೇಶನ್ ಮತ್ತು ವೈಷ್ಣವಿ ಇಬ್ಬರೂ ಮೃತಪಟ್ಟಿರುವುದು ಪತ್ತೆಯಾಯಿತು.
ಗಣೇಶನ್ ಅವರ ಪತ್ನಿ ಓಮನಾ ಹೋಂ ನರ್ಸ್ ಆಗಿದ್ದು, ಕರ್ತವ್ಯಕ್ಕೆ ತೆರಳಿದ್ದರು. ಪುತ್ರ ವಿಷ್ಣು ಕ್ಯಾಟರಿಂಗ್ ಕೆಲಸಕ್ಕೆ ತೆರಳಿದ್ದನು.
ತಂದೆ-ಮಗಳು ಮೃತಪಟ್ಟಿರುವ ಇದೇ ಬಾಡಿಗೆ ಮನೆಯಲ್ಲಿ ಈ ಹಿಂದೆ ಕೂಡ ಆತ್ಮಹತ್ಯೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ.

0 Comments