ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಮತ್ತು ಬಹುಭಾಷಾ ತಾರೆ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ(94) ನಿಧನರಾದರು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಚೆನ್ನೈನ ಆಸ್ಪತ್ರೆಯಲ್ಲಿ ಮಧ್ಯಾಹ್ನ 1:59ಕ್ಕೆ ವಿಧಿವಶರಾದರು.
ಏಳು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ತಮ್ಮ ನಟನಾ ಸಾಮರ್ಥ್ಯದಿಂದ ಚಿತ್ರರಂಗದಲ್ಲಿ ಅಪಾರ ಗೌರವ ಮತ್ತು ಅಭಿಮಾನಿಗಳನ್ನು ಸಂಪಾದಿಸಿದ್ದರು.
ಭಾರತೀಯ ಕಲೆ ಮತ್ತು ಚಿತ್ರರಂಗಕ್ಕೆ ಅವರು ನೀಡಿದ ಜೀವಮಾನದ ಕೊಡುಗೆಯನ್ನು ಪರಿಗಣಿಸಿ, ಭಾರತ ಸರ್ಕಾರವು ಅವರಿಗೆ 2022ರಲ್ಲಿ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಶಂಕರಮಂಚಿ ಶ್ರೀನಿವಾಸ ರಾವ್ ಅವರನ್ನು ಮದುವೆಯಾಗಿದ್ದ ಸಾಹುಕಾರ್ ಜಾನಕಿ ಅವರು ಮಕ್ಕಳಾದ ಯಜ್ಞಪ್ರಭಾ ಕೋಟಿ, ವೆಂಕಟರಮಣ ಶಂಕರಮಂಚಿ, ಸಾಚಿ ರಾವ್ ಅವರನ್ನು ಅಗಲಿದ್ದಾರೆ.
ಸಾಹುಕಾರ್ ಜಾನಕಿ ಅವರು ಕನ್ನಡದ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಡಾ.ರಾಜ್‌ಕುಮಾರ್ ನಟನೆಯ ಶಬ್ಧವೇದಿ ಮತ್ತು ಪುನೀತ್‌ರಾಜ್‌ಕುಮಾರ್ ನಟನೆಯ ಅಭಿ ಸಿನಿಮಾದಲ್ಲಿ ಪೋಷಕ ನಟಿಯಾಗಿ ನಟಿಸಿ ಜನಮನಗೆದ್ದಿದ್ದರು.
ಸಾಹುಕಾರ್ ಜಾನಕಿ ಅವರು ಕನ್ನಡದಲ್ಲಿ ಮೊದಲು ನಟಿಸಿದ ಸಿನಿಮಾ ದೇವಕನ್ನಿಕಾ. ತೆಲುಗಿನ ಸಾಹುಕಾರ್ ಚಿತ್ರದ ಯಶಸ್ಸಿನ ನಂತರ ಇವರ ಹೆಸರಿನೊಂದಿಗೆ ‘ಸಾಹುಕಾರ್’ ಎಂಬ ಬಿರುದು ಶಾಶ್ವತವಾಗಿ ಸೇರಿಕೊಂಡಿತು. ಇವರು ಕನ್ನಡ, ತಮಿಳು, ತೆಲುಗು ಸೇರಿದಂತೆ 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

0 Comments