ಕಾಸರಗೋಡು : ಪತ್ನಿಯ ಆತ್ಮಹತ್ಯೆಯಿಂದ ಮನನೊಂದು ಜೀವನ ನಡೆಸುತ್ತಿದ್ದ ಪತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ, ಬಿರಿಕುಳಂ, ಕುರುಂಬಾಯಿಯಲ್ಲಿ ನಡೆದಿದೆ.
ಕುರುಂಬಾಯಿಯ ಕೆ. ಪವಿತ್ರನ್ (58) ಮೃತಪಟ್ಟವರು. ಕೃಷಿಕರಾಗಿದ್ದ ಅವರು ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಮನೆಯ ಮಲಗುವ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಕೆಲಸಕ್ಕೆ ತೆರಳಿದ್ದ ಪುತ್ರ ಮನೆಗೆ ಮರಳಿದಾಗ ಪವಿತ್ರನ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಪವಿತ್ರನ್ ಅವರ ಪತ್ನಿ ಗೀತಾ ಅವರು ಕಳೆದ ಆಗಸ್ಟ್ 14ರಂದು ಇದೇ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಸಾವಿನ ಬಳಿಕ ಪವಿತ್ರನ್ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ.
ದಿ. ಪೊಕ್ಕನ್–ವಟ್ಟಿಚ್ಚಿ ದಂಪತಿಯ ಪುತ್ರರಾದ ಪವಿತ್ರನ್, ಮಕ್ಕಳಾದ ವೈಶಾಖ್ (ಲಾರಿ ಚಾಲಕ) ಹಾಗೂ ವೈಷ್ಣವ್ (ಬಸ್ ಕಂಡಕ್ಟರ್) ರನ್ನು ಅಗಲಿದ್ದಾರೆ. ವೆಳ್ಳರಿಕುಂಡ್ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

0 Comments