ಮಂಜೇಶ್ವರ : ಗಡಿ ಭಾಗಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಶಾಲೆಗಳ ಪಾತ್ರ ಮಹತ್ತರವಾಗಿದ್ದು, ಗಡಿನಾಡ ಶಾಲೆಗಳನ್ನು ತಂತ್ರಜ್ಞಾನದೊಂದಿಗೆ ಸಬಲೀಕರಣಗೊಳಿಸಲು ಸರ್ಕಾರ ಹಾಗೂ ಪ್ರಾಧಿಕಾರ ಸದಾ ಬದ್ಧವಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ತಿಳಿಸಿದರು. ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀಯಪದವಿನ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡಿದ 'ಸ್ಮಾರ್ಟ್ ಬೋರ್ಡ್ ಪ್ಯಾನೆಲ್' ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಹಿಸಿದ್ದರು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿ. ಎ. ತಾಜುದ್ದೀನ್ ಹಾಗೂ ಪಂಚಾಯತ್ ಸದಸ್ಯರಾದ ಸಿದ್ದೀಕ್ ಕೆ. ಎಂ. ಮುಖ್ಯ ಅತಿಥಿಗಳಾಗಿದ್ದರು. ಪ್ರಾಧಿಕಾರದ ಸದಸ್ಯರಾದ ಶಿವರೆಡ್ಡಿ ಖ್ಯಾಡೇದ, ಎ. ಆರ್. ಸುಬ್ಬಯ್ಯಕಟ್ಟೆ, ನಿವೃತ್ತ ಅಧ್ಯಾಪಕರಾದ ದಾಮೋದರ ಮಾಸ್ಟರ್, ಹಿರಿಯ ಗಮಕ ಕಲಾವಿದರಾದ ತೆಕ್ಕೇಕೆರೆ ಶಂಕರನಾರಾಯಣ ಭಟ್, ಶಾಲಾ ಪ್ರಾಂಶುಪಾಲರಾದ ರಮೇಶ್ ಕೆ. ಎನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಹಮೀದ್ ಮೈತಾಳ್, ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯರಾದ ಮೃದುಲ ಕೆ. ಎಂ. ಸ್ವಾಗತಿಸಿ, ಅಧ್ಯಾಪಕ ಲಕ್ಷ್ಮೀಶ. ಬಿ ವಂದಿಸಿದರು. ಕಿರಣ್. ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು.

.jpeg)
0 Comments