Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪಡುಕುತ್ಯಾರಿನಲ್ಲಿ ‘ಲೋಕ ಶಂಕರ’ – ರಂಗಭೂಮಿಯಲ್ಲಿ ಅನಾವರಣಗೊಂಡ ಆದಿಶಂಕರರ ದಿವ್ಯ ಜೀವನದರ್ಶನ

ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಸೆಪ್ಟೆಂಬರ್ 19ರಂದು ‘ಲೋಕ ಶಂಕರ’ ನಾಟಕ ರೂಪಕದ 6ನೇ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪರಮಪೂಜ್ಯ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ವ್ರತಾಚರಣೆ ಹಾಗೂ ಸುವರ್ಣ ಸಂಕಲ್ಪ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಈ ಪ್ರದರ್ಶನ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಭಾವನಾತ್ಮಕ ಸ್ಪಂದನ ಮೂಡಿಸಿತು.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ನಾಟಕದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಜನನದಿಂದ ಬ್ರಹ್ಮೈಕ್ಯದವರೆಗಿನ ಜೀವನಯಾನ, ಅವರ ಜ್ಞಾನಸಾಧನೆ, ತ್ಯಾಗ, ಭಕ್ತಿ, ಧರ್ಮಪ್ರಸಾರ ಹಾಗೂ ಅದ್ವೈತ ತತ್ವದ ಮಹತ್ವವನ್ನು ಹಾಡು, ನೃತ್ಯ, ಸಂಭಾಷಣೆ ಮತ್ತು ಅಭಿನಯದ ಮೂಲಕ ಮನಮುಟ್ಟುವ ರೀತಿಯಲ್ಲಿ ಅನಾವರಣಗೊಳಿಸಲಾಯಿತು.

ಕಾಲಟಿಯಲ್ಲಿ ಜನಿಸಿದ ಬಾಲಕ ಶಂಕರನ ಬಾಲ್ಯದಿಂದ ಆರಂಭಿಸಿ, ದೈವಾನುಗ್ರಹಕ್ಕೆ ಪಾತ್ರನಾದ ಸಂದರ್ಭಗಳು, ಕನಕಧಾರಾ ಸ್ತೋತ್ರದ ಮೂಲಕ ವ್ಯಕ್ತವಾದ ಕರುಣೆ, ಸನ್ಯಾಸ ಸ್ವೀಕಾರದ ಸಂದರ್ಭ, ಸನ್ಯಾಸ ಜೀವನದಲ್ಲಿ ಎದುರಾದ ಸವಾಲುಗಳು, ಧರ್ಮ ಮತ್ತು ತತ್ವಪ್ರಸಾರಕ್ಕಾಗಿ ಭಾರತದೆಲ್ಲೆಡೆ ನಡೆಸಿದ ಸಂಚಾರ, ನಾಲ್ಕು ಆಮ್ನಾಯ ಪೀಠಗಳ ಸ್ಥಾಪನೆ ಹಾಗೂ ಅಂತಿಮವಾಗಿ ಬ್ರಹ್ಮೈಕ್ಯ ಹೊಂದುವವರೆಗಿನ ಪ್ರಮುಖ ಘಟನೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ರಂಗದ ಮೇಲೆ ಮೂಡಿಸಲಾಯಿತು.

‘ಲೋಕ ಶಂಕರ’ ಕೇವಲ ಒಂದು ನಾಟಕವಲ್ಲ; ಒಂದು ಮಹಾನ್ ತತ್ವಜ್ಞಾನಿಯ ಜೀವನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಲಾತ್ಮಕ ಪ್ರಯತ್ನ ಎಂಬುದು ಪ್ರದರ್ಶನದುದ್ದಕ್ಕೂ ಸ್ಪಷ್ಟವಾಗಿ ಗೋಚರಿಸಿತು. ಆದಿಶಂಕರರ ಜ್ಞಾನ, ಭಕ್ತಿ, ತ್ಯಾಗ ಮತ್ತು ಧರ್ಮನಿಷ್ಠೆಯ ಸಂದೇಶವನ್ನು ಮನರಂಜನೆಯೊಂದಿಗೆ ಮೌಲ್ಯಯುತವಾಗಿ ತಲುಪಿಸುವಲ್ಲಿ ನಾಟಕ ಯಶಸ್ವಿಯಾಯಿತು.

ಈ ಯಶಸ್ಸಿನ ಹಿಂದೆ ಕಲಾವಿದರ ಸಮರ್ಪಿತ ಪರಿಶ್ರಮದ ಜೊತೆಗೆ ಕಥೆ ಮತ್ತು ಸಾಹಿತ್ಯ ರಚನೆ, ನಿರ್ದೇಶನ, ಸಂಗೀತ, ಸಂಚಾಲನೆ ಹಾಗೂ ನೇಪಥ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರ ಶ್ರಮವೂ ಅಡಗಿದೆ. ವೇದಿಕೆಯ ಮೇಲಿನ ಅಭಿನಯದಷ್ಟೇ ರಂಗಸಜ್ಜಿಕೆ, ನಾಟಕ ಪರಿಕರಗಳ ಸಿದ್ಧತೆ, ವೇಷಭೂಷಣ ಹಾಗೂ ಪ್ರದರ್ಶನದ ನಂತರದ ವೇದಿಕೆ ವಿಸರ್ಜನೆಯವರೆಗೂ ಕಲಾವಿದರು ಮತ್ತು ತಂಡದ ಸದಸ್ಯರು ತೊಡಗಿಸಿಕೊಂಡಿರುವುದು ‘ಲೋಕ ಶಂಕರ’ದ ವಿಶೇಷತೆಯಾಗಿದೆ.

ಇದರ ಮತ್ತೊಂದು ಮಹತ್ವದ ಅಂಶವೆಂದರೆ, ಈ ನಾಟಕವು ಉತ್ತಮ ಹವ್ಯಾಸಿ ರಂಗಕರ್ಮಿಗಳ ತಂಡವೊಂದನ್ನು ರೂಪಿಸಿರುವುದು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಗೃಹಿಣಿಯರು, ವಿದ್ಯಾರ್ಥಿಗಳು ಹಾಗೂ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರವರೆಗೆ ವಿಭಿನ್ನ ವಯೋಮಾನದವರು ತಂಡದಲ್ಲಿದ್ದಾರೆ. ನಾಟಕದ ಅಭ್ಯಾಸ, ಸಂಭಾಷಣೆ ಮತ್ತು ಅಭಿನಯದ ಜೊತೆಗೆ, ತಂಡವಾಗಿ ಕೆಲಸ ಮಾಡುವ ಗುಣ, ಆತ್ಮವಿಶ್ವಾಸ, ಏಕಾಗ್ರತೆ, ಸಮಯಪ್ರಜ್ಞೆ, ಸ್ಪಷ್ಟ ಉಚ್ಚಾರಣೆ, ಸಮಯಸ್ಫೂರ್ತಿ ಹಾಗೂ ಸ್ವಯಂ ಅವಲಂಬನೆಯಂತಹ ಹಲವು ಉತ್ತಮ ಗುಣಗಳನ್ನು ಬೆಳೆಸುವ ಸೃಜನಾತ್ಮಕ ವೇದಿಕೆಯಾಗಿ ‘ಲೋಕ ಶಂಕರ’ ರೂಪುಗೊಂಡಿದೆ.

ನಾಟಕದ 6ನೇ ಪ್ರದರ್ಶನದ ಬಳಿಕ ವೇದಿಕೆಗೆ ಆಗಮಿಸಿದ ಪೀಠದ ಆಪ್ತ ಸಹಾಯಕರಾದ ಲೋಲಾಕ್ಷ ಶರ್ಮ ಅವರು ನಾಟಕವನ್ನು ಮನಸಾರೆ ಶ್ಲಾಘಿಸಿ, ಆದಿಶಂಕರರ ಜೀವನ ಮತ್ತು ತತ್ವವನ್ನು ಅದ್ಭುತವಾಗಿ, ಮನಸ್ಸಿಗೆ ತಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಮೌಲ್ಯಾಧಾರಿತ ಪ್ರಯತ್ನಗಳು ಇನ್ನೂ ಹಲವು ಕಡೆಗಳಲ್ಲಿ ಪ್ರದರ್ಶನಗೊಳ್ಳುವಂತಾಗಲಿ, ಪೀಠಮಾತೆ ಶ್ರೀ ಸರಸ್ವತಿಯ ಅನುಗ್ರಹ ತಂಡದ ಮೇಲಿರಲಿ ಎಂದು ಹಾರೈಸಿದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಹಾಗೂ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ವಿಶ್ವಸ್ಥರಾದ ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆಯೂರು, ವಿಠಲ ಆಚಾರ್ಯ ಎಲ್ಲೂರು ಅವರೂ ಕಲಾವಿದರನ್ನು ಅಭಿನಂದಿಸಿ, ನಾಟಕದ ಗುಣಮಟ್ಟ ಮತ್ತು ಸಂದೇಶವನ್ನು ಪ್ರಶಂಸಿಸಿದರು.

ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಸಂಸ್ಕಾರ, ಸೃಜನಶೀಲತೆ ಮತ್ತು ಬದುಕಿನ ಮೌಲ್ಯಗಳನ್ನು ಕಲಿಸುವ ಜೀವಂತ ಪಾಠಶಾಲೆ. ಮೊಬೈಲ್, ಸಾಮಾಜಿಕ ಮಾಧ್ಯಮ ಹಾಗೂ ಒತ್ತಡದ ಬದುಕಿನ ನಡುವೆ ಬೆಳೆದಿರುವ ಇಂದಿನ ಪೀಳಿಗೆಗೆ ಸಂಭಾಷಣೆಯ ಕಲೆ, ಸ್ಪಷ್ಟ ಅಭಿವ್ಯಕ್ತಿ, ತಂಡದೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಗುಣ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಇಂತಹ ರಂಗಪ್ರಯೋಗಗಳು ಮಹತ್ವದ ಪಾತ್ರ ವಹಿಸುತ್ತವೆ.

ಆದಿಶಂಕರರ ಜೀವನದರ್ಶನವನ್ನು ರಂಗಭೂಮಿಯ ಮೂಲಕ ಜನಮನಕ್ಕೆ ತಲುಪಿಸುವ ‘ಲೋಕ ಶಂಕರ’ದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಜ್ಞಾನ, ಭಕ್ತಿ ಮತ್ತು ತ್ಯಾಗದ ಸಂದೇಶ ಹೊತ್ತ ಲೋಕ ಶಂಕರದ ಹೆಜ್ಜೆಗಳು ಇನ್ನಷ್ಟು ದೂರ ಸಾಗಲಿ; ಆದಿಶಂಕರರ ಅದ್ವೈತ ತತ್ವದ ಬೆಳಕು ಮನೆ ಮನೆಗಳನ್ನು ತಲುಪಲಿ; ಈ ತಂಡದ ಸೃಜನಶೀಲ ಪಯಣ ಇನ್ನಷ್ಟು ಸಮೃದ್ಧವಾಗಿ ಮುಂದುವರಿಯಲಿ ಎಂಬುದು ಎಲ್ಲರ ಆಶಯ.

Post a Comment

0 Comments

ಜಾಹೀರಾತು

Responsive Advertisement