ಉಪ್ಪಳ : ಬೇಕೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ನಡೆಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಪ್ಲಸ್ ಟು ವಿದ್ಯಾರ್ಥಿಗಳಾದ 14 ಮಂದಿಯ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶೂ ಧರಿಸಿದ್ದ ಹಾಗೂ ಶರ್ಟ್‌ನ ಮೊದಲ ಬಟನ್ ತೆರೆದಿದ್ದ ಕಾರಣ ಸೀನಿಯರ್ ವಿದ್ಯಾರ್ಥಿಗಳು ಗುಂಪಾಗಿ ಪ್ಲಸ್ ಒನ್ ವಿದ್ಯಾರ್ಥಿಗಳನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಕೈಗಳನ್ನು ಹಿಂದಕ್ಕೆ ತಿರುಚಿ, ಕೆನ್ನೆಗೆ ಹೊಡೆದು ಹಾಗೂ ಶೂ ಧರಿಸಿದ್ದ ಕಾಲಿನಿಂದ ಒದ್ದಿರುವುದಾಗಿ ವಿದ್ಯಾರ್ಥಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಘಟನೆಗೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಶಾಲೆಯಲ್ಲಿ ಈ ಹಿಂದೆಯೂ ರ‍್ಯಾಗಿಂಗ್ ಆರೋಪಗಳು ಕೇಳಿಬಂದಿದ್ದು, ಹಲವು ಬಾರಿ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಶಾಲಾ ಪ್ರಾಂಶುಪಾಲರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

0 Comments