ಕೊಡ್ಲಮೊಗರು: ಮಂಜೇಶ್ವರ ಉಪಜಿಲ್ಲಾ ಕ್ರೀಡಾಮೇಳದ ವಿವಿಧ ಸಮಿತಿಗಳ ಪುನರಾವಲೋಕನ ಸಭೆಯು ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷರಾದ ಮೋಹನ್ ಮಾಸ್ಟರ್ ವಹಿಸಿದ್ದರು.
ಮುಖ್ಯೋಪಾಧ್ಯಾಯರ ವೇದಿಕೆಯ ಕಾರ್ಯದರ್ಶಿ ಸತ್ಯ ಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವರ್ಕಾಡಿ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಮೊಹಿದೀನ್ ಕುಂಞಿ ಕ್ರೀಡಾಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶುಚಿತ್ವದ ಕುರಿತು ವಹಿಸಬೇಕಾದ ಮುಂಜಾಗ್ರತೆಯ ಬಗ್ಗೆ ಮಾತನಾಡಿದರು. ನಿವೃತ್ತ ದೈಹಿಕ ಶಿಕ್ಷಕರಾದ ಚಂದ್ರಶೇಖರ್ ರೈ ಸಲಹೆ ಸೂಚನೆಗಳನ್ನು ನೀಡಿದರು. ವಿವಿಧ ಸಮಿತಿಗಳ ಕನ್ವೀನರ್‌ಗಳು ತಮ್ಮ ಕಾರ್ಯ ಯೋಜನೆಗಳನ್ನು ಮಂಡಿಸಿದರು. ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸೌಮ್ಯ, ಪಿ.ಇ.ಸಿ ಕಾರ್ಯದರ್ಶಿ ಪ್ರತಿಭಾ ಟೀಚರ್, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ನಿವೃತ್ತ ಅಧ್ಯಾಪಕರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಮೊದಲಾದವರು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಟೀಚರ್ ಸ್ವಾಗತಿಸಿ, ಸ್ವಾತಿ ಟೀಚರ್ ವಂದಿಸಿದರು.

0 Comments