ಮಂಜೇಶ್ವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಮಂಜೇಶ್ವರ ತಾಲೂಕು ವ್ಯಾಪ್ತಿಯ 2080ನೇ ಮದ್ಯವರ್ಜನ ಶಿಬಿರದ ನೂತನ ನವಜೀವನ ಸಮಿತಿಯ ದ್ವಿತೀಯ ತಿಂಗಳ ಸಭೆ ಕಳತ್ತೂರಿನ ಶ್ರೀ ಮಹಾದೇವ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ (ಉಡುಪಿ ಪ್ರಾದೇಶಿಕ ವ್ಯಾಪ್ತಿ) ಯೋಜನಾಧಿಕಾರಿ ಗಣೇಶ್ ಆಚಾರ್ಯ ಮುಖ್ಯ ಮಾರ್ಗದರ್ಶಕರಾಗಿ ಭಾಗವಹಿಸಿ ಮಾತನಾಡಿದರು.
"ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ನಡೆಯಲಿರುವ ಭಜನಾ ಕಮ್ಮಟದಲ್ಲಿ ನವ ಜೀವನ ಸಮಿತಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಬೇಕು. ಜತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಧಾರ್ಮಿಕ ಮತ್ತು ನೈತಿಕ ವಾತಾವರಣ ಬೆಳೆಸಲು ಮನೆಮನೆ ಭಜನಾ ಕಾರ್ಯಕ್ರಮ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವ ಗಾಂಧಿ ಜಯಂತಿ ಆಚರಣೆಯ ಕುರಿತು ಪ್ರತಿಯೊಬ್ಬ ಸದಸ್ಯರೂ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು" ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಳತ್ತೂರು ವಾರ್ಡ್ ಸದಸ್ಯ ಸುಕೇಶ್ ಭಂಡಾರಿ, ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಮಹೇಶ್ ಪುಣಿಯೂರು, ಯೋಜನೆಯ ಮೇಲ್ವಿಚಾರಕ ಅಭಿಷೇಕ್, ಸೇವಾಪ್ರತಿನಿಧಿ ಸ್ವರ್ಣಲತಾ ಹಾಗೂ ನವಜೀವನ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ವಲಯ ಮೇಲ್ವಿಚಾರಕರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನವಜೀವನ ಸಮಿತಿ ಸದಸ್ಯ ವಿನೀತ್ ವಂದಿಸಿದರು.

0 Comments