ಪೆರ್ಲ: ಏಳ್ಳಾನ ಶ್ರೀಕೃಷ್ಣ ಸೇವಾ ಸಮಿತಿಯ 27ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಏಳ್ಳಾನದ ಶ್ರೀಕೃಷ್ಣ ಸೇವಾ ಸಮಿತಿಯ ಕಚೇರಿಯ ಪರಿಸರದಲ್ಲಿ ನಡೆಯಿತು. ಬೆಳಗ್ಗೆ ಕಲಶ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳೂ ಆಯೋಜಿಸಲಾಗಿದ್ದು, ಮಕ್ಕಳಿಂದ ಸೇರಿದಂತೆ ಹಲವರು ಉತ್ಸಾಹದಿಂದ ಭಾಗವಹಿಸಿದರು. ಮಧ್ಯಾಹ್ನ ಅನ್ನಪ್ರಸಾದ ವಿತರಿಸಲಾಯಿತು. ಅಂಗನವಾಡಿ ಮಕ್ಕಳಿಗಾಗಿ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆ ಗಮನ ಸೆಳೆಯಿತು.
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ. ಉದ್ಘಾಟಿಸಿದರು. ಉಮೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೆಂಕಟರಮಣ ಭಟ್ ಧಾರ್ಮಿಕ ಭಾಷಣ ಮಾಡಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್.,ಧಾರ್ಮಿಕ ಮುಂದಾಳು ಉದಯ ಚೆಟ್ಟಿಯಾರ್ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿ ನಾರಾಯಣ ಭಟ್ ಬಣ್ಣುತ್ತಡ್ಕ ಅವರನ್ನು ಸನ್ಮಾನಿಸಲಾಯಿತು.ಎಸ್ಸಸ್ಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ಎ ಪ್ಲಸ್ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಶರತ್ ಚಂದ್ರ ಶೆಟ್ಟಿ ಶುಭಾಶಂಸನೆಗೈದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಂಜೆ ಸ್ಥಳೀಯ ಪ್ರತಿಭಾನ್ವಿತರಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಅಂಕಿತಾ ಸ್ವಾಗತಿಸಿ ಐತ್ತಪ್ಪ ನಾಯ್ಕ್ ಬಿ.ಸಿ.ವಂದಿಸಿದರು. ರವಿರಾಜ್ ಏಳ್ಕಾನ ನಿರೂಪಿಸಿದರು.

0 Comments