ಮಂಗಳೂರು : "ಡಿಜಿಟಲ್ ಲೋಕದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ತುಳು ವಿಕಿಪೀಡಿಯ ಮಹತ್ತರ ಪಾತ್ರ ವಹಿಸುತ್ತಿದೆ. ತುಳು ಭಾಷೆಗೆ ತುಳು ವಿಕಿಪೀಡಿಯ ದೊಡ್ಡ ಶಕ್ತಿ ನೀಡಿದೆ" ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಹೇಳಿದರು. ಮಂಗಳೂರಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಶನಿವಾರ ತುಳು ವಿಕಿಪೀಡಿಯ ಹಾಗೂ ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಆಶ್ರಯದಲ್ಲಿ ಆಯೋಜಿಸಿದ್ದ ‘ತುಳು ವಿಕಿಪೀಡಿಯ ದಶ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಳುನಾಡಿನಲ್ಲಿ ಹಾಗೂ ತುಳು ಭಾಷೆಯಲ್ಲಿ ಹಲವು ವಿಶೇಷತೆಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ದಾಖಲಿಸಿ ಬಳಸಿಕೊಳ್ಳದ ಕಾರಣ ತುಳು ಸೀಮಿತ ಪರಿಧಿಯಲ್ಲೇ ಉಳಿದಿದೆ. ಈ ಸೀಮಿತ ವ್ಯಾಪ್ತಿಯಿಂದ ತುಳು ಹೊರಬರಬೇಕಿದೆ. ಹೊಸ ಸಂಶೋಧನೆಗಳು, ಅಧ್ಯಯನ ಆಧಾರಿತ ಬರಹಗಳು ಹಾಗೂ ವೈವಿಧ್ಯಮಯ ಲೇಖನಗಳನ್ನು ಆಧುನಿಕತೆಗೆ ತಕ್ಕಂತೆ ಯುವಜನತೆ ರೂಪಿಸಿ, ಮುಂದಿನ ತಲೆಮಾರಿಗೆ ತುಳು ಭಾಷೆಯ ಶ್ರೀಮಂತಿಕೆಯನ್ನು ಪರಿಚಯಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ತುಳು ವಿಕಿಪೀಡಿಯ ತಂಡ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.
ವಿಕಿಪೀಡಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಕಾಸ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ಶ್ರೀಮಂತ ಹಾಗೂ ಪ್ರಾಚೀನ ಭಾಷೆಯಾಗಿದೆ. ತುಳು ಭಾಷೆ ಇನ್ನಷ್ಟು ಬೆಳೆಯಬೇಕಾದರೆ ಡಿಜಿಟಲ್ ಲೋಕದಲ್ಲಿ ಅದರ ಬಳಕೆ ವಿಸ್ತರಿಸಬೇಕು. ಇದಕ್ಕೆ ವಿಕಿಪೀಡಿಯ ಉತ್ತಮ ವೇದಿಕೆಯಾಗಿದೆ. ತುಳುವನ್ನು ಕೆಲವೇ ಕ್ಷೇತ್ರಗಳಿಗೆ ಸೀಮಿತಗೊಳಿಸದೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಬಳಸಬೇಕು. ಯುವಜನತೆ ತಮ್ಮಲ್ಲಿರುವ ತುಳು ಹಾಗೂ ತುಳುನಾಡಿನ ವಿಶೇಷ ಮಾಹಿತಿಗಳನ್ನು ಲೇಖನಗಳ ರೂಪದಲ್ಲಿ ವಿಕಿಪೀಡಿಯಕ್ಕೆ ಕೊಡುಗೆಯಾಗಿ ನೀಡಬೇಕು. ಇದರಿಂದ ವಿಕಿಪೀಡಿಯದಲ್ಲಿ ತುಳು ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ತುಳು ವಿಕಿಪೀಡಿಯ ನಿರ್ವಾಹಕ ಡಾ. ಯು.ಬಿ. ಪವನಜ ಅವರು ‘ವಿಕಿಪೀಡಿಯ ಕೋಡೆ–ಇನಿ’ ವಿಷಯದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲಯಾಳ ವಿಕಿಪೀಡಿಯದ ರಂಜಿತ್ ಸಜಿ, ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದಶ ಸಂಭ್ರಮದ ಸಂಘಟಕ ಕಿಶೋರ್ ಕುಮಾರ್ ಸ್ವಾಗತಿಸಿ, ತುಳು ವಿಕಿಪೀಡಿಯ ನಿರ್ವಾಹಕ ಭರತೇಶ ಅಲಸಂಡೆಮಜಲು ವಂದಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮಹಾಲಿಂಗ ಭಟ್ ಕಾರ್ಯಕ್ರಮ ನಿರೂಪಿಸಿದರು.


0 Comments