ಮಂಗಳೂರು : ಕರಾವಳಿಯ ಮಣ್ಣಿನ ಸೊಗಡಿನಲ್ಲಿ, ತುಳುನಾಡಿನ ಹೃದಯಭಾಗವಾದ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಐತಿಹಾಸಿಕ ಸಭೆ ತುಳುವರ ಪಾಲಿಗೆ ಅವಿಸ್ಮರಣೀಯ ದಿನವೊಂದಕ್ಕೆ ಸಾಕ್ಷಿಯಾಯಿತು. ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸುಮಾರು 60 ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಂಗಳೂರು ಜಿಲ್ಲೆ ಸಾಧಿಸಿರುವ ಪ್ರಗತಿ ಮತ್ತು ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದರು.
ತುಳು ಒಂದು ಭಾಷೆಯಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಿದ ಭಾಷೆಯಾಗಿದೆ. ತುಳು ಭಾಷೆ ಎರಡು ಸಾವಿರ ವರ್ಷಗಳಿಗೂ ಹಳೆಯದು; ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆಯನ್ನು ಗಣ್ಯರು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಲ್ಲಿಸಿದ್ದರು. ತಜ್ಞರು ಮತ್ತು ಅಧಿಕಾರಿಗಳಿಂದ ಈ ಬಗ್ಗೆ ವರದಿ ಪಡೆಯಲಾಗಿದೆ. ಈ ಅಂಶಗಳ ಆಧಾರದಲ್ಲಿ ಇಂದಿನ ಸಚಿವ ಸಂಪುಟ ಸಭೆಯು ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಆಡಳಿತ ಸರ್ಕಾರಿ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯದ ಹೆಚ್ಚುವರಿ ಸಲಕೃತ ಭಾಷೆ ಎಂದು ಘೋಷಣೆ ಮಾಡಲು ಅನುಮೋದನೆ ನೀಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ಈ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾಡಳಿತವನ್ನು ಅನುಷ್ಠಾನ ಕೇಂದ್ರವಾಗಿ ಮಾಡಲಾಗುವುದು. ಅನುವಾದ, ತರಬೇತಿ ಮತ್ತು ಭಾಷಾ ಬಳಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ರತಿ ವರ್ಷ 82 ಲಕ್ಷ ರೂ. ಒದಗಿಸಲಾಗುವುದು ಎಂದರು.
ತುಳು ಕೇವಲ ಒಂದು ಭಾಷೆಯಲ್ಲ; ಅದು ಕರಾವಳಿಯ ಜನಜೀವನದ ಉಸಿರು, ಸಂಸ್ಕೃತಿಯ ಕನ್ನಡಿ ಹಾಗೂ ತಲೆಮಾರುಗಳಿಂದ ಬಂದಿರುವ ಅಸ್ಮಿತೆಯ ಪ್ರತೀಕ. ಇಂತಹ ಭಾಷೆಗೆ ಅಧಿಕೃತ ಮಾನ್ಯತೆ ದೊರೆಯುವ ಘೋಷಣೆ ತುಳುನಾಡಿನ ಜನರಲ್ಲಿ ಹೊಸ ಸಂಭ್ರಮ ಮೂಡಿಸಿದೆ. ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕರಾವಳಿಯಲ್ಲಿ ಕೇಳಿಬರುತ್ತಿತ್ತು. ವಿವಿಧ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಭಾಷಾಭಿಮಾನಿಗಳು ಹಾಗೂ ತುಳುವರ ಸಮುದಾಯಗಳು ಈ ಬೇಡಿಕೆಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಘೋಷಣೆ ತುಳು ಭಾಷಾ ಹೋರಾಟದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಾ, ಈ ಹಿಂದೆ ಮಂಗಳೂರಿನ ಕುರಿತು ತಾವು ಟೀಕಾತ್ಮಕವಾಗಿ ಮಾತನಾಡಿದ್ದನ್ನು ನೆನಪಿಸಿಕೊಂಡರು. ಆದರೆ ಇದೀಗ ಮಂಗಳೂರು ಮತ್ತು ಕರಾವಳಿಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಮಂಗಳೂರು ಜಿಲ್ಲೆಯ ಹೆಸರಿನ ಕುರಿತೂ ಮುಖ್ಯಮಂತ್ರಿ ಮಹತ್ವದ ಮಾತುಗಳನ್ನು ಹೇಳಿದರು. ಈ ವಿಚಾರವನ್ನು ತಕ್ಷಣ ಅಂತಿಮಗೊಳಿಸದೆ ಒಂದು ತಿಂಗಳ ಕಾಲ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಮಂಗಳೂರನ್ನು ಜನರ ಮನಸ್ಸಿನಲ್ಲಿ ಅದರ ಸಹಜ ಹೆಸರಿನೊಂದಿಗೆ ಗುರುತಿಸಬೇಕು ಎಂಬ ಆಶಯವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ನಡೆದ ಈ ಘೋಷಣೆ ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ; ತಮ್ಮ ಮಾತೃಭಾಷೆಗೆ ಗೌರವದ ಸ್ಥಾನ ಸಿಗಬೇಕೆಂದು ಕನಸು ಕಂಡ ಅಸಂಖ್ಯಾತ ತುಳುವರ ಭಾವನೆಗಳಿಗೆ ಸ್ಪಂದಿಸಿದ ಕ್ಷಣವಾಗಿದೆ. ಮನೆಯ ಅಂಗಳದಿಂದ ಸಾಹಿತ್ಯದ ವೇದಿಕೆಯವರೆಗೆ, ಯಕ್ಷಗಾನದಿಂದ ಭೂತಾರಾಧನೆಯವರೆಗೆ, ಜನಪದ ಗೀತೆಗಳಿಂದ ದೈನಂದಿನ ಬದುಕಿನ ಮಾತುಕತೆಯವರೆಗೆ ತುಳು ಭಾಷೆ ಕರಾವಳಿಯ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಬೆರೆತಿದೆ. ತಲೆಮಾರುಗಳು ಕಾಪಾಡಿಕೊಂಡು ಬಂದ ಭಾಷೆಗೆ ಅಧಿಕೃತ ಮಾನ್ಯತೆಯ ಬಾಗಿಲು ತೆರೆದಿರುವ ಈ ಘೋಷಣೆ, ತುಳುನಾಡಿನ ಭಾಷಾ-ಸಾಂಸ್ಕೃತಿಕ ಪಯಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

0 Comments