Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೆಎಸ್‌ಆರ್‌ಟಿಸಿ ಬಸ್‌ಗಳ ಸುರಕ್ಷತೆ ಖಚಿತಪಡಿಸಲು ತುರ್ತು ಕ್ರಮ ಅಗತ್ಯ: ಎಂ.ಎಲ್. ಅಶ್ವಿನಿ

ಕಾಸರಗೋಡು : ನೀಲೇಶ್ವರ ಸಮೀಪದ ಪಡನ್ನಕ್ಕಾಡ್‌ನಲ್ಲಿ ಕೆಎಸ್‌ಆರ್‌ಟಿಸಿ ಪ್ರಿಯದರ್ಶಿನಿ ಬಸ್‌ನ ಪ್ಲಾಟ್‌ಫಾರ್ಮ್ ಮುರಿದು ಕೆಳಗೆ ಬಿದ್ದ ಪರಿಣಾಮ ಪ್ರಯಾಣಿಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಫಿಟ್‌ನೆಸ್ ಹಾಗೂ ಸುರಕ್ಷತೆ ಬಗ್ಗೆ ಗಂಭೀರ ಆತಂಕ ಮೂಡಿಸಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ.

ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆ ಖಚಿತಪಡಿಸಲು ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತುರ್ತಾಗಿ ಸುರಕ್ಷತಾ ಪರಿಶೀಲನೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೇರಳದಲ್ಲೇ ಅತ್ಯಂತ ಹಳೆಯ ಬಸ್‌ಗಳ ಪೈಕಿ ಹಲವು ಕಾಸರಗೋಡು ಜಿಲ್ಲೆಯಲ್ಲಿ ಸಂಚರಿಸುತ್ತಿವೆ. ಅದೇ ವೇಳೆ, ಜಿಲ್ಲೆಯಲ್ಲಿ ಸಂಚರಿಸುವ ಕರ್ನಾಟಕದ ಸಾಮಾನ್ಯ ಬಸ್‌ಗಳು ಕೇರಳದ ಹಲವು ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಹೆಚ್ಚು ಸುರಕ್ಷಿತ ಹಾಗೂ ಆಧುನಿಕವಾಗಿವೆ ಎಂದು ಅವರು ಹೇಳಿದ್ದಾರೆ. ಹಳೆಯ ಸಾಮಾನ್ಯ ಬಸ್‌ಗಳ ಬಹುತೇಕ ಭಾಗಗಳು ತುಕ್ಕು ಹಿಡಿದ ಸ್ಥಿತಿಯಲ್ಲಿವೆ. ಕಾಲ ಹಳೆಯದಾದ ಹಾಗೂ ತುಕ್ಕು ಹಿಡಿದ ಬಸ್‌ಗಳನ್ನು ರಸ್ತೆಗೆ ಇಳಿಸುವುದನ್ನು ತಡೆಯಲು ಮೋಟಾರು ವಾಹನ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬಸ್‌ಗಳ ವಿಮೆ ಹಾಗೂ ಫಿಟ್‌ನೆಸ್ ಪ್ರಮಾಣಪತ್ರಗಳ ಬಗ್ಗೆಯೂ ಸ್ಪಷ್ಟತೆ ಅಗತ್ಯವಿದೆ. ವಿಶೇಷವಾಗಿ ಪ್ರಿಯದರ್ಶಿನಿ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಅವಲಂಬಿಸಿರುವುದರಿಂದ, ಇಂತಹ ಬಸ್‌ಗಳ ಸುರಕ್ಷತಾ ಪರಿಶೀಲನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದು ಅಶ್ವಿನಿ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಬಳಿಕ ಮಾತ್ರ ಪರಿಶೀಲನೆ ನಡೆಸುವ ಬದಲು, ಅಪಾಯಗಳನ್ನು ಮುಂಚಿತವಾಗಿ ಗುರುತಿಸಿ ಪರಿಹರಿಸುವ ಶಾಶ್ವತ ಸುರಕ್ಷತಾ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿಯಲ್ಲಿ ಜಾರಿಗೆ ತರಬೇಕು. ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement