Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆನೆಗುಂದಿ ಮಹಾಸಂಸ್ಥಾನದಲ್ಲಿ ಸೆ. 26ರಂದು ಚಾತುರ್ಮಾಸ್ಯ ಸಮಾರೋಪ : ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ‘ಸುವರ್ಣ ಸಂಕಲ್ಪ ವರ್ಷಾಚರಣೆ’ಗೆ ಚಾಲನೆ

ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ-ಪಡುಕುತ್ಯಾರು ಇದರ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ ಸಮಾರಂಭ ಸೆಪ್ಟೆಂಬರ್ 26ರಂದು ಪಡುಕುತ್ಯಾರಿನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಜಗದ್ಗುರುಗಳವರ 50ನೇ ಜನ್ಮವರ್ಧಂತಿಯ ಹಿನ್ನೆಲೆಯಲ್ಲಿ ‘ಸುವರ್ಣ ಸಂಕಲ್ಪ ವರ್ಷಾಚರಣೆ 2026–27’ಕ್ಕೂ ಚಾಲನೆ ದೊರೆಯಲಿದೆ. ‘ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕೃತಿಕ ಪಂಚಪ್ರಬೋಧನ ಸಂಕಲ್ಪ’ದ ಆಶಯದೊಂದಿಗೆ ಧಾರ್ಮಿಕ ಜಾಗೃತಿ, ಸಾಂಸ್ಕೃತಿಕ ಸಂರಕ್ಷಣೆ, ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಒತ್ತು ನೀಡುವ ವಿವಿಧ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಲಾಗಿದೆ.

 ವಿಜಯಾಭ್ಯುದಯ ಶಾಲಿವಾಹನ ಶಕ 1948, ಪರಾಭವ ನಾಮ ಸಂವತ್ಸರದ ಆಷಾಢ ಗುರುಪೌರ್ಣಮಿಯಂದು ಜುಲೈ 29ರಂದು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಆರಂಭಗೊಂಡಿದ್ದ 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು ಸೆ. 26ರಂದು ಭಾದ್ರಪದ ಶುಕ್ಲ ಪೌರ್ಣಮಿಯಂದು ಸಮಾಪನಗೊಳ್ಳಲಿದೆ.

ವ್ರತಾಚರಣೆಯ ಅವಧಿಯಲ್ಲಿ ವಿವಿಧ ವೈದಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಡೆದಿದ್ದು, ಸಮಾರೋಪ ಸಮಾರಂಭವನ್ನು ವೈಭವದಿಂದ ಆಯೋಜಿಸಲಾಗಿದೆ.

ಸೆ. 26ರಂದು ಬೆಳಿಗ್ಗೆ 6.30ಕ್ಕೆ ವಿಶ್ವಕರ್ಮ ಯಜ್ಞ ಆರಂಭವಾಗಿ, 7.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಪಡುಕುತ್ಯಾರು ಮಠದ ಸಮೀಪ ಸೀಮೋಲ್ಲಂಘನ ಹಾಗೂ 8.30ಕ್ಕೆ ದಿಗ್ವಿಜಯ ಮೆರವಣಿಗೆ ನಡೆಯಲಿದೆ.

ದಿಗ್ವಿಜಯ ಮೆರವಣಿಗೆಯು ಪಡುಕುತ್ಯಾರಿನಿಂದ ಕಟಪಾಡಿಯ ಬೆಳಗುತ್ತಿಮಠದಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀ ಅನಂತಶ್ರೀವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನಕ್ಕೆ ತೆರಳಲಿದೆ. ಬಳಿಕ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ, ಕಟಪಾಡಿ ಆನೆಗುಂದಿ ಮಹಾಸಂಸ್ಥಾನ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ ಹಾಗೂ ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರಗಳಿಗೆ ಭೇಟಿ ನೀಡಿ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಮಠಕ್ಕೆ ಪುನರಾಗಮಿಸಲಿದೆ.

ಪೂರ್ಣಕುಂಭ ಸ್ವಾಗತದೊಂದಿಗೆ ಜಗದ್ಗುರುಗಳವರು ಮಹಾಸಂಸ್ಥಾನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಬೆಳಿಗ್ಗೆ 10ಕ್ಕೆ ಗೋಪೂಜೆ, 11ಕ್ಕೆ ಶ್ರೀಗುರುಪಾದಪೂಜೆ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆ ಹಾಗೂ ಚಾತುರ್ಮಾಸ್ಯ ಸಮಾರೋಪ ಸಮಾರಂಭ ಜರುಗಲಿದೆ. ಮಧ್ಯಾಹ್ನ 1.30ಕ್ಕೆ ಮಹಾ ಸಂತರ್ಪಣೆ ನಡೆಯಲಿದೆ.

ಪರಮಪೂಜ್ಯ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಚನದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ವಡೇರಹೋಬಳಿಯ  ವಿ. ಶ್ರೀಧರ ಆಚಾರ್ಯ ವಹಿಸಲಿದ್ದಾರೆ.

ಉಡುಪಿ, ಪಡುಬಿದ್ರಿ, ಪಾಂಡೇಶ್ವರ, ಉಡುಪಿ, ಕಾರ್ಕಳ, ಕಳಿ, ಮೂಡಬಿದ್ರೆ, ಹೊನ್ನಾವರ, ಶಿರಾಲಿ, ಮಾನಂಪಾಡಿ, ಕಾಪು, ಕೋಟೆಕಾರು, ಬಂಗ್ರಮಂಜೇಶ್ವರ, ಆರಿಕ್ಕಾಡಿ, ಕಂಬಾರು, ಕಾಞಂಗಾಡು, ಪನ್ವೇಲ್, ಬೆಂಗಳೂರು, ಪಡುಪಣಂಬೂರು, ಕುಮಟಾ, ಹೊಸಪೇಟೆ, ಕಾಡಬೆಟ್ಟು, ಹಳೆಯಂಗಡಿ, ಕೆಮ್ಮಣ್ಣು, ಮಂಗಳೂರು ಸೇರಿದಂತೆ ವಿವಿಧೆಡೆಗಳ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ.

ಚಾತುರ್ಮಾಸ್ಯ ವ್ರತಾಚರಣೆಯ ಯಶಸ್ಸಿಗಾಗಿ ನಿಸ್ವಾರ್ಥವಾಗಿ ಶ್ರಮಿಸಿದ ಸರ್ವರಿಗೂ ಸಮಾರಂಭದಲ್ಲಿ ಅಭಿನಂದನೆ ಹಾಗೂ ಕೃತಜ್ಞತಾ ಸಮರ್ಪಣೆ ನಡೆಯಲಿದೆ. ಬಳಿಕ ಜಗದ್ಗುರುಗಳವರಿಂದ ಅನುಗ್ರಹ ಮಂತ್ರಾಕ್ಷತೆ ನೀಡಲಾಗುವುದು.

ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 50ನೇ ಜನ್ಮವರ್ಧಂತಿಯ ಹಿನ್ನೆಲೆಯಲ್ಲಿ ‘ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕೃತಿಕ ಪಂಚಪ್ರಬೋಧನ ಸಂಕಲ್ಪ’ದ ಆಶಯದೊಂದಿಗೆ ‘ಸುವರ್ಣ ಸಂಕಲ್ಪ ವರ್ಷಾಚರಣೆ 2026–27’ ಹಮ್ಮಿಕೊಳ್ಳಲಾಗಿದೆ.

ವರ್ಷಪೂರ್ತಿ ಐದು ಪ್ರಮುಖ ಸಂಕಲ್ಪಗಳನ್ನು ಜಾರಿಗೊಳಿಸಲು ಯೋಜಿಸಲಾಗಿದೆ. ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸಲು ಶ್ರೀ ಬಾಲ ಸರಸ್ವತೀ ಹೋಮ ಆಯೋಜಿಸಲಾಗುವುದು. ಮನೆ–ಕೂಡುವಳಿಕೆ–ಸಮಾಜ–ದೇವಸ್ಥಾನ–ಕುಲಗುರುಪೀಠ ಎಂಬ ಐದು ಸ್ತರಗಳ ಮೂಲಕ ಸಾಮಾಜಿಕ ಕರ್ತವ್ಯ, ಧಾರ್ಮಿಕ ಜವಾಬ್ದಾರಿ ಹಾಗೂ ವೈದಿಕ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ಪಂಚಪ್ರಬೋಧ ಜಾಗೃತಿ ಅಭಿಯಾನ ನಡೆಯಲಿದೆ.

ಯುವಜನರಲ್ಲಿ ಐಕ್ಯತೆ, ಪ್ರತಿಭೆ, ಸಹಭಾಗಿತ್ವ ಹಾಗೂ ಸಂಘಟನಾ ಮನೋಭಾವ ಬೆಳೆಸಲು ವಿವಿಧ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ಅವುಗಳ ಸಮಾರೋಪವನ್ನು ಶ್ರೀಗುರುಮಠದಲ್ಲಿ ನಡೆಸುವ ಯೋಜನೆಯೂ ಇದೆ.

ಶೈಕ್ಷಣಿಕ ಹಾಗೂ ಔದ್ಯೋಗಿಕ ಪ್ರಗತಿ, ಮಿತವ್ಯಯ, ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ, ಯೋಜಿತ ಬದುಕು ಹಾಗೂ ಆರ್ಥಿಕ ಸಬಲೀಕರಣದ ಕುರಿತು ಚಿಂತನ–ಮಂಥನ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು.

ಸುವರ್ಣ ಸಂಕಲ್ಪ ವರ್ಷದ ಅಂತ್ಯದಲ್ಲಿ ಶಿಷ್ಯವೃಂದದ ಬಹುಕಾಲದ ಕನಸಾಗಿರುವ ಆನೆಗುಂದಿ ಕುಲಗುರು ಪೀಠ–ಶ್ರೀ ಸರಸ್ವತೀ ದೇವಸ್ಥಾನ ಹಾಗೂ ಗುರುಮಠದ ಪೂರಕ ನಿರ್ಮಾಣ ಯೋಜನೆಗೆ ಬೃಹತ್ ಶಿಲಾನ್ಯಾಸ ನೆರವೇರಿಸುವ ಮಹಾಸಂಕಲ್ಪವನ್ನೂ ಕೈಗೊಳ್ಳಲಾಗಿದೆ.

Post a Comment

0 Comments

ಜಾಹೀರಾತು

Responsive Advertisement