ಕಾನ್ಪುರ : ಔಷಧ ವ್ಯಾಪಾರಿ ವಿನೀತ್ ಮನೋಚಾ (60) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಸುಬ್ರತ್ ಮನೋಚಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಂದೆಯ ಹತ್ಯೆಗೆ ಸುಪಾರಿ ನೀಡಿದ ಆರೋಪ ಸುಬ್ರತ್ ವಿರುದ್ಧ ಕೇಳಿಬಂದಿದೆ.
ಸೆಪ್ಟೆಂಬರ್ 5ರಂದು ಕಲ್ಯಾಣಪುರದ ರತನ್ ಆರ್ಬಿಟ್ ಅಪಾರ್ಟ್‌ಮೆಂಟ್‌ನಲ್ಲಿ ವಿನೀತ್ ಅವರನ್ನು ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮರುದಿನವೇ ವಿನೀತ್ ಅವರ ಸೊಸೆ ಶಾಲು ಹಾಗೂ ಸುಪಾರಿ ಹಂತಕರಾದ ವಿಶಾಲ್ ಗೌತಮ್ ಮತ್ತು ರಾಜ್‌ಕಿಶೋರ್ ಅವರನ್ನು ಬಂಧಿಸಿದ್ದರು.
ಬಂಧಿತರ ಪೊಲೀಸ್ ಕಸ್ಟಡಿ ಅವಧಿಯಲ್ಲಿ ನಡೆದ ವಿಚಾರಣೆಯಲ್ಲಿ, ವಿಶಾಲ್ ಗೌತಮ್ ತಮಗೆ 6 ಲಕ್ಷ ರೂ. ಸುಪಾರಿ ನೀಡುವುದಾಗಿ ಭರವಸೆ ನೀಡಿ ವಿನೀತ್ ಅವರನ್ನು ಕೊಲೆ ಮಾಡುವಂತೆ ಸುಬ್ರತ್ ಸೂಚಿಸಿದ್ದ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಶಾಲು ಅವರ ಹೆಸರನ್ನು ಹೇಳುವಂತೆ ಸುಬ್ರತ್ ಸೂಚಿಸಿದ್ದ ಎನ್ನಲಾಗಿದೆ.
ವಿಚಾರಣೆ ವೇಳೆ ಶಾಲು ಕೂಡ ತನ್ನ ಪತಿಯನ್ನು ರಕ್ಷಿಸುವ ಉದ್ದೇಶದಿಂದ ಕೊಲೆಯ ಹೊಣೆಯನ್ನು ತಾನೇ ಹೊತ್ತುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ, ಕೊಲೆಗೆ ಕೆಲ ದಿನಗಳ ಮೊದಲು ವಿಶಾಲ್ ಗೌತಮ್ ಹೊಸ ಸಿಮ್ ಕಾರ್ಡ್ ಪಡೆದು ಸುಬ್ರತ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದೇ ವೇಳೆ ಅಪಾರ್ಟ್‌ಮೆಂಟ್ ಆವರಣದ ಖಾಲಿ ಜಾಗದಲ್ಲಿ ಎಸೆಯಲಾಗಿದ್ದ ಕೊಠಡಿಯ ಕೀಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ರಾಜ್‌ಕಿಶೋರ್‌ನನ್ನು ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆದೊಯ್ದು, ಸಾರ್ವಜನಿಕ ಶೌಚಾಲಯದ ಹಿಂಭಾಗದಲ್ಲಿ ಅಡಗಿಸಿಟ್ಟಿದ್ದ ರಕ್ತದ ಕಲೆಗಳಿದ್ದ ಪ್ಯಾಂಟ್ ಹಾಗೂ ಕಪ್ಪು ಸ್ಕಾರ್ಫ್‌ನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಹಣಕಾಸಿನ ವಹಿವಾಟು, ಮೊಬೈಲ್ ಕರೆ ದಾಖಲೆಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

0 Comments