ಬದಿಯಡ್ಕ : ಪೆರ್ಲ ವಿದ್ಯುತ್ ಸೆಕ್ಷನ್ ವ್ಯಾಪ್ತಿಯ ಗುಣಾಜೆ ಟ್ರಾನ್ಸ್‌ಫಾರ್ಮರ್ ಸಮೀಪ ದ್ಯುತಿ ಯೋಜನೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಎಲ್‌ಟಿಎಬಿ ಕೇಬಲ್ ಕಳವು ನಡೆದಿರುವ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪೆರ್ಲ ವಿದ್ಯುತ್ ಸೆಕ್ಷನ್‌ನ ಸಹಾಯಕ ಎಂಜಿನಿಯರ್ ನೀಡಿದ ದೂರಿನ ಪ್ರಕಾರ, ಕಳವುಗೈದವರು ಮುಖವಾಡ ಧರಿಸಿಕೊಂಡು ಗುರುವಾರ ಮುಂಜಾನೆ 2.30ರಿಂದ 4 ಗಂಟೆಯೊಳಗೆ ಸ್ಥಳಕ್ಕೆ ಆಗಮಿಸಿ, ಎರಡು ಡ್ರಮ್‌ಗಳಲ್ಲಿದ್ದ ಒಟ್ಟು 1,000 ಮೀಟರ್ ಎಲ್‌ಟಿ ಎಬಿ ಕೇಬಲ್‌ನ್ನು ಪಿಕಪ್ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.
ಸ್ಥಳೀಯ ನಿವಾಸಿಯೊಬ್ಬರು ದೂರವಾಣಿ ಮೂಲಕ ಮಾಹಿತಿ ನೀಡಿದ ಬಳಿಕ ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕೇಬಲ್ ಕಳವಾಗಿರುವುದು ದೃಢಪಟ್ಟಿದೆ. ಸಮೀಪದ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ, ಮುಖವಾಡ ಧರಿಸಿದ ಕೆಲವರು ಕೇಬಲನ್ನು ಪಿಕಪ್ ವಾಹನಕ್ಕೆ ತುಂಬಿಕೊಂಡು ತೆರಳುತ್ತಿರುವ ದೃಶ್ಯಗಳು ಲಭ್ಯವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳವಾಗಿರುವ ಕೇಬಲ್‌ನ ಅಂದಾಜು ಮೌಲ್ಯ ರೂ.4,00,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಬದಿಯಡ್ಕ ಪೋಲಿಸರು ಕಳ್ಳರ ಪತ್ತೆಗಾಗಿ ತನಿಖೆ ನಿರತರಾಗಿದ್ದಾರೆ.
ಎಣ್ಮಕಜೆ ಗ್ರಾ.ಪಂ.ನ 14ನೇ ವಾರ್ಡಿನ ಗುಣಾಜೆ - ಪೊಸಡ್ಕದಲ್ಲಿ ದ್ಯುತಿ ಯೋಜನೆಗಾಗಿ 6 ಲಕ್ಷ ರೂ ಮೀಸಲಿರಿಸಿ ಈ ಕಾಮಗಾರಿಗಾಗಿ ತಂದಿಳಿಸಿದ ಕೇಬಲ್ ಆಗಿದೆ ಕಳವುಗೈದಿರುವುದು. ಈ ಹಿಂದೆಯೂ ಈ ಪ್ರದೇಶಗಳಲ್ಲಿ ಹಲವು ಬಾರಿ ಕಳವು ಪ್ರಕರಣಗಳು ನಡೆದಿದ್ದರೂ ಕಳ್ಳರನ್ನು ಪತ್ತೆ ಹಚ್ಚಲಾಗಲಿಲ್ಲ. ಈ ಕೃತ್ಯವನ್ನು ಶೀಘ್ರವೇ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಾರ್ಡ್ ಸದಸ್ಯರೂ,ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷರು ಆದ ಸಿದ್ದಿಕ್ ವಳಮೊಗರು ಆಗ್ರಹಿಸಿದ್ದಾರೆ.


0 Comments