ಬೆಳ್ತಂಗಡಿ : ಆಹಾರ ಅರಸಿ ಬಂದ ಚಿರತೆಯೊಂದು ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದ ಘಟನೆ ತಾಲೂಕಿನ ಕರಿಮಣೇಲು ಗ್ರಾಮದ ಬಕ್ಯರಡ್ಡ ಸಮೀಪ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬಕ್ಯರಡ್ಡ ನಿವಾಸಿ ಅಶೋಕ್ ಪೂಜಾರಿ ಅವರಿಗೆ ಸೇರಿದ ಸುಮಾರು 30 ಅಡಿ ಆಳದ ಬಾವಿಗೆ ಚಿರತೆ ಬಿದ್ದಿತ್ತು. ಬಾವಿಯಲ್ಲಿ ಸುಮಾರು 6 ಅಡಿ ನೀರಿತ್ತು. ಸೆ.21ರಂದು ಬೆಳಗ್ಗೆ ಮನೆಯವರು ಬಾವಿಯ ಬಳಿ ತೆರಳಿದಾಗ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗ್ರಾಮಸ್ಥರ ಸಹಕಾರದೊಂದಿಗೆ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಲಾಯಿತು.
ಕುಂದಾಪುರ ವಿಭಾಗದ ಡಿಎಫ್‌ಒ ರುತ್ರನ್ ಹಾಗೂ ಮೂಡುಬಿದಿರೆ ಎಸಿಎಫ್ ಆಕಾಶ್ ಕದಂ ಅವರ ಮಾರ್ಗದರ್ಶನದಲ್ಲಿ ವೇಣೂರು ಆರ್‌ಎಫ್‌ಒ ಭರತ್, ಡಿಆರ್‌ಎಫ್‌ಒ ಅಶ್ವಿತ್, ಅರಣ್ಯ ರಕ್ಷಕ ದಿವಾಕರ, ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

0 Comments