ಕಾಸರಗೋಡು : ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಧನ್ಯ ಸುರೇಶ್, ಐಎಎಸ್ ಅವರನ್ನು ಪೆರ್ಲ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ನಿಯೋಗವು ಭೇಟಿಯಾಗಿ ಅಭಿನಂದಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿತು.
ಈ ಸಂದರ್ಭದಲ್ಲಿ ಮರಾಟಿ ಪರಿಶಿಷ್ಟ ಪಂಗಡದ ಕಲ್ಯಾಣ ಹಾಗೂ ಪೆರ್ಲ ಪ್ರದೇಶದ ವಿವಿಧ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.
1953ರಲ್ಲಿ ಅಂದಿನ ಮದ್ರಾಸ್ ಸರ್ಕಾರದ ನೆರವಿನಿಂದ ಆರಂಭಗೊಂಡ ಪೆರ್ಲದ ಐತಿಹಾಸಿಕ ‘ಮರಾಟಿ ಬೋರ್ಡಿಂಗ್ ಹಾಲ್’ನ ಇತಿಹಾಸ ಹಾಗೂ ಪ್ರಸ್ತುತ ನಡೆಯುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ವಿವರಗಳನ್ನು ಒಳಗೊಂಡ ಮನವಿ ಪತ್ರವನ್ನು ನಿಯೋಗವು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿತು.
ಮರಾಟಿ ಪರಿಶಿಷ್ಟ ಪಂಗಡದ ಪಾರಂಪರಿಕ ಕೇಂದ್ರವಾಗಿರುವ ಬೋರ್ಡಿಂಗ್ ಹಾಲ್ ಮೂಲಕ ಶಾರದಾ ಮರಾಟಿ ಮಹಿಳಾ ವೇದಿಕೆ ಹಾಗೂ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸಂಸ್ಕೃತಿ ಸಂರಕ್ಷಣೆ, ಉಚಿತ ವೈದ್ಯಕೀಯ ಶಿಬಿರ, ಶಿಕ್ಷಣ ಪ್ರೋತ್ಸಾಹ, ಸಿಪಿಆರ್ ತರಬೇತಿ, ಧನಸಹಾಯ ವಿತರಣೆ ಹಾಗೂ ವಿಪತ್ತು ಪರಿಹಾರ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ನಿಯೋಗವು ಜಿಲ್ಲಾಧಿಕಾರಿಗಳಿಗೆ ವಿವರಿಸಿತು.
ಇದೇ ವೇಳೆ ಪೆರ್ಲದಲ್ಲಿರುವ ಪಾರಂಪರಿಕ ಮರಾಟಿ ಬೋರ್ಡಿಂಗ್ ಹಾಲ್‌ಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಅವರಿಗೆ ನಿಯೋಗವು ಆತ್ಮೀಯ ಆಹ್ವಾನ ನೀಡಿತು. ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಜಿ. ನಾಯ್ಕ್, ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷೆ ಪುಷ್ಪ ಅಮೆಕ್ಕಳ, ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಟೀಚರ್, ಕಾರ್ಯದರ್ಶಿ ಗೋಪಿಕೃಷ್ಣ ಬದಿಯಡ್ಕ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಹಿರಿಯ ಮಕ್ಕಳ ವೈದ್ಯ ಡಾ. ಬಿ. ನಾರಾಯಣ ನಾಯ್ಕ್, ಸಮುದಾಯದ ಮುಖಂಡ ಹಾಗೂ ಪೆರ್ಲ ಮರಾಟಿ ಬೋರ್ಡಿಂಗ್ ಹಾಲ್ ಮೇಲ್ವಿಚಾರಕ ಸಿ.ಎಚ್. ಗೋವಿಂದ ನಾಯ್ಕ್, ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಜಗದೀಶ್ ನಾಯ್ಕ್ ಹಾಗೂ ಸಂಘದ ಸದಸ್ಯ ಬಾಲಕೃಷ್ಣ ನಾಯ್ಕ್ ಭೇಟಿಯಾದ ನಿಯೋಗದಲ್ಲಿದ್ದರು.

0 Comments