ಮಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ನಿವಾಸಗಳು, ಕಚೇರಿಗಳು ಸೇರಿದಂತೆ ವಿವಿಧೆಡೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧ ಕಾರ್ಯಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಕಾಂಗ್ರೆಸ್ ಎಸ್ಸಿ ಘಟಕ ತೀವ್ರವಾಗಿ ಖಂಡಿಸಿದೆ.
ಸೆಪ್ಟೆಂಬರ್ 9 ಮತ್ತು 10ರಂದು ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರು ಮತ್ತು ಆಪ್ತರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ಇ.ಡಿ. ಶೋಧ ನಡೆಸಿತ್ತು. ವಿದೇಶಿ ಹೂಡಿಕೆ ಹಾಗೂ ವಿದೇಶಿ ವಿನಿಮಯ ವ್ಯವಹಾರಗಳಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿರುವುದಾಗಿ ಇ.ಡಿ. ತಿಳಿಸಿದೆ.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು, ಸತೀಶ್ ಜಾರಕಿಹೊಳಿ ಅವರ ರಾಜಕೀಯ ಯಶಸ್ಸು ಮತ್ತು ತಂತ್ರಗಾರಿಕೆಯನ್ನು ಸಹಿಸದ ಕೇಂದ್ರ ಸರ್ಕಾರವು ವಿಪಕ್ಷ ನಾಯಕರ ಆತ್ಮವಿಶ್ವಾಸ ಕುಗ್ಗಿಸುವ ಉದ್ದೇಶದಿಂದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕರ ಮೇಲೆ ಈ ಹಿಂದೆ ನಡೆದಿರುವ ಹಲವು ಇ.ಡಿ ದಾಳಿಗಳಿಂದ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಅವರು ಹೇಳಿದರು.
ಸತೀಶ್ ಜಾರಕಿಹೊಳಿ ಅವರು ಕೇವಲ ರಾಜಕಾರಣಿಯಾಗಿರದೆ ಸಾಮಾಜಿಕ ಚಿಂತನೆ ಹೊಂದಿರುವ ನಾಯಕರು. ಶಿಕ್ಷಣ, ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವುದರ ಜತೆಗೆ, ತಂದೆ-ತಾಯಿ ಇಲ್ಲದ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಯು ಪಿ ಎಸ್ ಸಿ , ಕೆ ಪಿ ಎಸ್ ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕರಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಾಮಾಜಿಕ ಕಾಳಜಿಯುಳ್ಳ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳ ಕ್ರಮವನ್ನು ರಾಜಕೀಯ ಉದ್ದೇಶದಿಂದ ನಡೆಸಲಾಗುತ್ತಿದೆ ಎಂಬುದು ಕಾಂಗ್ರೆಸ್ ಎಸ್ಸಿ ಘಟಕದ ಆರೋಪವಾಗಿದೆ.

0 Comments