ಕುಂಬಳೆ : ಶಾಲೆಯ ಅಂಗಳವೆಂದರೆ ಕೇವಲ ಪಾಠ ಕಲಿತ ಜಾಗವಲ್ಲ; ಬದುಕಿನ ಅಮೂಲ್ಯ ನೆನಪುಗಳನ್ನು ಬಚ್ಚಿಟ್ಟಿರುವ ಭಾವನೆಗಳ ತಾಣ. ವರ್ಷಗಳು ಕಳೆದರೂ ಬಾಲ್ಯದ ಆ ದಿನಗಳ ನೆನಪುಗಳು ಮನದಾಳದಲ್ಲಿ ಹಸಿರಾಗಿಯೇ ಉಳಿದಿರುತ್ತವೆ. ಅಂತಹ ನೆನಪುಗಳನ್ನು ಮತ್ತೆ ಮೆಲುಕು ಹಾಕುತ್ತಾ, ಹಳೆಯ ಸ್ನೇಹವನ್ನು ನವೀಕರಿಸುತ್ತಾ ಶಾಲಾ ಹಳೆ ವಿದ್ಯಾರ್ಥಿಗಳ ಸಂಗಮವು ಆತ್ಮೀಯ ವಾತಾವರಣದಲ್ಲಿ ಜರುಗಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಯಾನಂದ ಪಿ.ಎಸ್. ನಗರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ ಎ. ಸ್ವಾಗತಿಸಿದರು. ಕಾರ್ಯದರ್ಶಿ ಕರಿಂ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ಡ್ ಸದಸ್ಯ ಸತೀಶ ಪೆರ್ಣೆ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಪಿ.ಟಿ.ಎ. ಅಧ್ಯಕ್ಷ ಮೊಯಿದು ಸೀತಾಂಗೋಳಿ, ಜಾನಿ ಡಿ.ಸೋಜ, ಕಿರಣ್ ಕೆ.ಎಸ್., ಗೋಪಾಲ ಕೃಷ್ಣ ಪೆರ್ಣೆ, ಬಾಬು ಪಿ., ದಯಾನಂದ ಪೆರ್ಣೆ, ಶಿವರಾಂ ಭಟ್, ಪ್ರಸನ್ನ ಕುಮಾರಿ ಸೇರಿದಂತೆ ಹಲವಾರು ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡರು. ತರಗತಿ ಕೊಠಡಿಗಳಲ್ಲಿ ಕಳೆದ ಬಾಲ್ಯದ ಕ್ಷಣಗಳು, ಗುರುಗಳ ಮಾರ್ಗದರ್ಶನ, ಗೆಳೆಯರ ಒಡನಾಟ ಹಾಗೂ ಮರೆಯಲಾಗದ ಘಟನೆಗಳನ್ನು ಮೆಲುಕು ಹಾಕಿದಾಗ, ಹಲವು ವರ್ಷಗಳ ಅಂತರವೇ ಇಲ್ಲದಂತಾಗಿ ಎಲ್ಲರ ಮನದಲ್ಲೂ ಹಳೆಯ ದಿನಗಳು ಮತ್ತೆ ಜೀವಂತವಾದವು.
ಒಬ್ಬೊಬ್ಬರ ನೆನಪಿನ ಬುತ್ತಿಯಿಂದ ಹೊರಬಂದ ಅನುಭವಗಳು ನಗು, ಸಂತಸ ಹಾಗೂ ಭಾವುಕತೆಯ ಕ್ಷಣಗಳಿಗೆ ಸಾಕ್ಷಿಯಾದವು. ಶಾಲೆಯೊಂದಿಗೆ ಬೆಸೆದುಕೊಂಡಿದ್ದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ ಈ ಸಂಗಮವು ಹಳೆ ವಿದ್ಯಾರ್ಥಿಗಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿ ಮೂಡಿಬಂತು.
ಶಾಲಾ ಅಧ್ಯಾಪಕರು, ಪಿ.ಟಿ.ಎ. ಸದಸ್ಯರು ಹಾಗೂ ನೂರಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಸ್ನೇಹ, ನೆನಪು ಮತ್ತು ಶಾಲೆಯೊಂದಿಗಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾದ ಈ ಹಳೆ ವಿದ್ಯಾರ್ಥಿಗಳ ಸಂಗಮವು, ಕಾಲ ಬದಲಾದರೂ ನೆನಪುಗಳು ಬದಲಾಗುವುದಿಲ್ಲ ಎಂಬುದನ್ನು ಸಾರಿತು.


0 Comments