ಕಾಸರಗೋಡು : ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕಾಸರಗೋಡು ಜಿಲ್ಲಾ ಸಮ್ಮೇಳನ ಅಕ್ಟೋಬರ್ 24 ಮತ್ತು 25ರಂದು ಕಾಸರಗೋಡಿನಲ್ಲಿ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಅಕ್ಟೋಬರ್ 24ರಂದು ಶನಿವಾರ ಬೆಳಗ್ಗೆ 9.30ಕ್ಕೆ ಜಿಲ್ಲೆಯ 38 ಪಂಚಾಯಿತಿಗಳು ಹಾಗೂ ಮೂರು ನಗರಸಭೆಗಳ ವ್ಯಾಪ್ತಿಯಿಂದ ಸುಮಾರು 10,000 ಕಾರ್ಮಿಕರು ಭಾಗವಹಿಸುವ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯೊಂದಿಗೆ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ.
ಮೆರವಣಿಗೆಯ ಬಳಿಕ ನಡೆಯುವ ಸಾರ್ವಜನಿಕ ಸಭೆಯನ್ನು ಬಿಎಂಎಸ್ ರಾಜ್ಯ ಕಾರ್ಯದರ್ಶಿ ಕೆ.ವಿ. ಮಧುಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೆ. ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸ್ವಾಗತಿಸಲಿದ್ದಾರೆ.
ಬಿಎಂಎಸ್ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ಸಿ. ಬಾಲಚಂದ್ರನ್ (ಪಾಲಕ್ಕಾಡ್), ರಾಜ್ಯ ಉಪಾಧ್ಯಕ್ಷರಾದ ಅಡ್ವ. ಪಿ. ಮುರಳೀಧರನ್ (ಕಾಸರಗೋಡು) ಸೇರಿದಂತೆ ಪ್ರಮುಖರು ಸಭೆಯಲ್ಲಿ ಮಾತನಾಡಲಿದ್ದಾರೆ. ಮಧ್ಯಾಹ್ನದ ಬಳಿಕ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಯಲಿದೆ.
ಅಕ್ಟೋಬರ್ 25ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಕಾಸರಗೋಡಿನ ಆರ್.ಕೆ. ಮಾಲ್‌ನಲ್ಲಿ ಪ್ರತಿನಿಧಿಗಳ ಸಭೆ ಆರಂಭವಾಗಲಿದೆ. ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೆ. ಅಧ್ಯಕ್ಷತೆ ವಹಿಸಲಿದ್ದು, ಬಿಎಂಎಸ್ ಅಖಿಲ ಭಾರತ ಉಪಾಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ಟರ್ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಅಡ್ವ. ಎ.ಸಿ. ಅಶೋಕ ಕುಮಾರ್ ಶುಭ ಹಾರೈಸಲಿದ್ದಾರೆ. ಬಿಎಂಎಸ್ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ಸಿ. ಬಾಲಚಂದ್ರನ್, ರಾಜ್ಯ ಉಪಾಧ್ಯಕ್ಷರಾದ ಅಡ್ವ. ಪಿ. ಮುರಳೀಧರನ್ (ಕಾಸರಗೋಡು), ಅಡ್ವ. ಪಿ. ಮುರಳೀಧರನ್ (ಕೋಯಿಕ್ಕೋಡ್) ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಮಹೇಶ್ ಕುಮಾರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರತಿನಿಧಿಗಳ ಸಭೆಯಲ್ಲಿ ಕಳೆದ ಮೂರು ವರ್ಷಗಳ ಕಾರ್ಯಚಟುವಟಿಕೆಗಳ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಗುವುದು. ವಿವಿಧ ನಿರ್ಣಯಗಳನ್ನು ಮಂಡಿಸುವುದರ ಜತೆಗೆ ಸಂಘಟನೆಯ ಕಾರ್ಯವೈಖರಿ ಕುರಿತು ಚರ್ಚೆ ನಡೆಯಲಿದೆ. ಬಳಿಕ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ನಡೆಯಲಿದ್ದು, ರಾಷ್ಟ್ರಗೀತೆಯೊಂದಿಗೆ ಸಮ್ಮೇಳನ ಮುಕ್ತಾಯಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೆ., ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಜಂಟಿ ಕಾರ್ಯದರ್ಶಿ ದಿನೇಶ್ ಪಿ., ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್ ಹಾಗೂ ಟಿ. ಕೃಷ್ಣನ್ ಉಪಸ್ಥಿತರಿದ್ದರು.

0 Comments