ಬೆಂಗಳೂರು: ಪತ್ನಿಯ ನಡವಳಿಕೆ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಕೆಯನ್ನು ಹತ್ಯೆಗೈದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಾಜಕಾಲುವೆಗೆ ಎಸೆದ ಆರೋಪದ ಮೇಲೆ ಬಿಹಾರ ಮೂಲದ 22 ವರ್ಷದ ವ್ಯಕ್ತಿಯನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಇಫ್ಜಾನ್ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆ ರುಕ್ಸಾನಾ (25) ಎಂದು ತಿಳಿದುಬಂದಿದೆ.
ರುಕ್ಸಾನಾ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರೆ, ಇಫ್ಜಾನ್ ಗುಜರಿ ಅಂಗಡಿಯಲ್ಲಿ ದುಡಿಯುತ್ತಿದ್ದನು. ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ಬೆಂಗಳೂರಿನ ಗೋವಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಪತ್ನಿ ಮೊಬೈಲ್‌ನಲ್ಲಿ ಇತರರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಅನುಮಾನದಿಂದ ಇಫ್ಜಾನ್ ಪದೇಪದೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಅಕ್ಟೋಬರ್ 10ರಂದು ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಇಫ್ಜಾನ್ ಕಲ್ಲಿನಿಂದ ಪತ್ನಿಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಕೆಲಸದ ಸ್ಥಳದಿಂದ ಸ್ಕೂಟರ್ ಪಡೆದುಕೊಂಡು ಹೋಗಿ ರಾಜಕಾಲುವೆಗೆ ಎಸೆದಿದ್ದಾನೆ ಎನ್ನಲಾಗಿದೆ. ಅಕ್ಟೋಬರ್ 13ರಂದು ಚರಂಡಿಯಲ್ಲಿ ಮಹಿಳೆಯ ಶವ ಪತ್ತೆಯಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.
ವಿಚಾರಣೆ ವೇಳೆ ರುಕ್ಸಾನಾ ಬಿಹಾರಕ್ಕೆ ತೆರಳಿದ್ದಾಳೆ ಎಂದು ಇಫ್ಜಾನ್ ಸುಳ್ಳು ಮಾಹಿತಿ ನೀಡಿದ್ದ ಎನ್ನಲಾಗಿದೆ. ಆದರೆ, ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪತ್ನಿಯನ್ನು ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

0 Comments