Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾರಿನಲ್ಲಿ ಎಂಡಿಎಂಎ ಸಾಗಾಟ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ, ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ಕಾಸರಗೋಡು : ಕಾರಿನಲ್ಲಿ ಸಾಗಿಸುತ್ತಿದ್ದ 70.87 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಪುರಂ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಕುಂಬಳೆ ಪೋಲಿಸ್ ಠಾಣಾ ವ್ಯಾಪ್ತಿಯ ಕಯ್ಯಾರು ಸಮೀಪದ ಚೇವಾರ್ ನಿವಾಸಿ ಅಬ್ದುಲ್ ರಝಾಕ್ (36) ಬಂಧಿತ ಆರೋಪಿ. ರಾಜಪುರಂ ವೃತ್ತ ನಿರೀಕ್ಷಕ ಎ. ಸಂತೋಷ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಸೆಪ್ಟೆಂಬರ್ 30ರಂದು ಕೊಳಿಚಾಲ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಹಿಂದೆ  ಕಯ್ಯಾರು ಸಮೀಪದ ಚೇವಾರ್‌ನ ಮೊಹಮ್ಮದ್ ಶರೀಫ್ (38), ಪುತ್ತಿಗೆ ಎ.ಕೆ.ಜಿ. ನಗರದ ಪಿ.ಕೆ. ಅಬ್ದುಲ್ ಶಹೀರ್ (38) ಹಾಗೂ ದಂಡಗೋಳಿ ಪೂಕ್ಕಟ್ಟೆ ಹೌಸ್‌ನ ಮೊಹಮ್ಮದ್ ನಾಸರ್ (34) ಅವರನ್ನು ಬಂಧಿಸಲಾಗಿತ್ತು.

ಆರೋಪಿಗಳ ವಿಚಾರಣೆ ವೇಳೆ ಲಭಿಸಿದ ಮಾಹಿತಿಯ ಆಧಾರದಲ್ಲಿ ಇತರರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶರೀಫ್‌ನನ್ನು ಇತ್ತೀಚೆಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಆತನಿಂದ ದೊರೆತ ಮಾಹಿತಿಯ ಮೇರೆಗೆ ಅಬ್ದುಲ್ ರಝಾಕ್‌ನನ್ನು ಬಂಧಿಸಲಾಗಿದೆ. ಕೊಳಿಚಾಲ್ ಎಂಡಿಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ಸಾಗಾಟ ಜಾಲದ ಎಲ್ಲ ಆರೋಪಿಗಳನ್ನು ಪತ್ತೆಹಚ್ಚಲು ರಾಜಪುರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement