Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನಲ್ಲಿ ರೈಲ್ವೆ ಸಿಗ್ನಲ್ ಕೇಬಲ್ ಕದ್ದ ಅಸ್ಸಾಂ ನಿವಾಸಿಗಳಾದ ಆರು ಮಂದಿ ಬಂಧನ

ಚೆರುವತ್ತೂರು: ರೈಲ್ವೆ ಸಿಗ್ನಲ್ ಕೇಬಲ್ ಕಳವು ಮಾಡಿದ ಅಸ್ಸಾಂ ಮೂಲದ ಆರು ಮಂದಿಯನ್ನು ಹಾಗೂ ಕಳವು ಮಾಡಿದ ವಸ್ತುಗಳನ್ನು ಖರೀದಿಸಿದ ಗುಜರಿ ಅಂಗಡಿ ಮಾಲೀಕನನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ವಿಶೇಷ ತನಿಖಾ ತಂಡ ಬಂಧಿಸಿದೆ. ಚೆರುವತ್ತೂರು, ಪಯ್ಯನ್ನೂರು, ಪಡನ್ನಕ್ಕಾಡ್ ಮತ್ತು ಪರಿಯಾರಂ ಪ್ರದೇಶಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕಳವಿಗೆ ಬಳಸಿದ ವಾಹನವನ್ನು ಪಡನ್ನಕ್ಕಾಡ್‌ನಿಂದ ವಶಕ್ಕೆ ಪಡೆಯಲಾಗಿದೆ.

ಕಾರಿಯಂಕೋಡ್ ಹಳೆಯ ಸೇತುವೆಯ ಸಮೀಪ ಚೆರುವತ್ತೂರು ಭಾಗಕ್ಕೆ ಸೇರಿದ ರೈಲ್ವೆ ಸಿಗ್ನಲ್ ಕೇಬಲ್‌ಗಳನ್ನು ಕತ್ತರಿಸಿ ಕಳವು ಮಾಡಲಾಗಿತ್ತು. ಅಕ್ಟೋಬರ್ 18ರಂದು ಕೇಬಲ್ ಕಳವಾಗಿತ್ತು. ಸಿಗ್ನಲ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಕೇಬಲ್ ಕತ್ತರಿಸಿರುವುದು ಬೆಳಕಿಗೆ ಬಂದಿತ್ತು.

ಪಾಲಕ್ಕಾಡ್ ವಿಭಾಗೀಯ ಭದ್ರತಾ ಆಯುಕ್ತರ ಸೂಚನೆಯಂತೆ ರಚಿಸಲಾದ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿರುವ ಮನೆಗಳು ಹಾಗೂ ಇತರ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಗುಜರಿ ಅಂಗಡಿಗಳ ಮೇಲೆ ನಿಗಾ ಇರಿಸಿ ತನಿಖೆ ನಡೆಸಲಾಗಿತ್ತು.

ಪಾಲಕ್ಕಾಡ್ ಆರ್‌ಪಿಎಫ್ ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಎ.ಪಿ. ದೀಪಕ್, ಎಸ್‌ಐ ಅಜಿತ್ ಕುಮಾರ್, ಎಎಸ್‌ಐ ಶಿಜು, ಕಾಸರಗೋಡು ಆರ್‌ಪಿಎಫ್ ಇನ್‌ಸ್ಪೆಕ್ಟರ್ ಎನ್.ಕೆ. ಶಶಿ ಹಾಗೂ ಎಎಸ್‌ಐ ವಿನೋಜ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಬಂಧಿತ ಆರೋಪಿಗಳನ್ನು ಚೆರುವತ್ತೂರು, ಪಯ್ಯನ್ನೂರು, ಪಡನ್ನಕ್ಕಾಡ್ ಮತ್ತು ಪರಿಯಾರಂ ಪ್ರದೇಶಗಳಿಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಲಾಯಿತು. ಚೆರುವತ್ತೂರು ಕೊವ್ವಲ್‌ನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಎರಡು ಮನೆಗಳಲ್ಲಿ ಕಳವು ಮಾಡಿದ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ವಿಚಾರಣೆ ವೇಳೆ ಪರಿಯಾರಂನ ಗುಜರಿ ಅಂಗಡಿಯೊಂದರಲ್ಲಿ ಕಳವು ಮಾಡಿದ ಕೇಬಲ್‌ಗಳಿಂದ ಬೇರ್ಪಡಿಸಿದ ತಾಮ್ರದ ತಂತಿಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗುಜರಿ ಅಂಗಡಿ ಮಾಲೀಕನನ್ನೂ ಬಂಧಿಸಲಾಗಿದೆ.

ಆರೋಪಿಗಳು ಹಗಲಿನಲ್ಲಿ ವಾಹನಗಳಲ್ಲಿ ಸಂಚರಿಸಿ ಗುಜರಿ ವಸ್ತುಗಳನ್ನು ಸಂಗ್ರಹಿಸುವ ನೆಪದಲ್ಲಿ ಸ್ಥಳಗಳನ್ನು ಗುರುತಿಸುತ್ತಿದ್ದರು. ಬಳಿಕ ರಾತ್ರಿ ವೇಳೆ ಕಳವು ಮಾಡುತ್ತಿದ್ದರು ಎಂದು ತನಿಖಾ ತಂಡ ತಿಳಿಸಿದೆ.

Post a Comment

0 Comments

ಜಾಹೀರಾತು

Responsive Advertisement