ಮಂಗಳೂರು : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದ 'ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ'ದಡಿಯಲ್ಲಿ ನಡೆಯಲಿರುವ ನಾಲ್ಕನೇ ವರ್ಷದ 'ಕುಡ್ಲದ ಪಿಲಿ ಪರ್ಬ-2026' ದ ಚಪ್ಪರ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು "ದಸರಾ ಸಂದರ್ಭದಲ್ಲಿ ಇಡೀ ತುಳುನಾಡಿನಲ್ಲೇ ಹುಲಿವೇಷದ ಸಂಭ್ರಮ ಮನೆ ಮಾಡಿರುತ್ತದೆ. ಇಂದು ಈ ನೆಲದ ಕಲೆ ತುಳುನಾಡು ಮಾತ್ರವಲ್ಲದೇ ದೇಶ - ವಿದೇಶಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಈ ಜನಪ್ರಿಯತೆ ಜೊತೆಗೆ ಈ ಕಲೆಗೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಇದೇ ಅಕ್ಟೋಬರ್ 18 ಭಾನುವಾರದಂದು ನಡೆಯಲಿರುವ ಐದನೇ ವರ್ಷದ ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ ಹುಲಿವೇಷ ತಂಡಗಳಿಗೂ ಶುಭಹಾರೈಕೆಗಳು. ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಲಿರುವ ಸಾರ್ವಜನಿಕರೆಲ್ಲರಿಗೂ ಪ್ರೀತಿಯ ಸ್ವಾಗತ ಬಯಸುತ್ತಾ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಸಾಧಿಸಲಿ, ಎಂದು ಶುಭ ಹಾರೈಸುತ್ತೇನೆ" ಎಂದರು.
ಈ ಸಂದರ್ಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಮಲಾಕ್ಷ ಬಜಿಲಕೇರಿ, ಕಿರಣ್ ಶೆಣೈ, ನರೇಶ್ ಪ್ರಭು, ಜಗದೀಶ್ ಕದ್ರಿ, ಲಲಿತ್ ಮೆಂಡನ್ ಸೇರಿದಂತೆ ಪ್ರತಿಷ್ಠಾನದ ಅನೇಕ ಪ್ರಮುಖರು ಉಪಸ್ಥಿತರಿದ್ದರು.

0 Comments