ಮಂಗಳೂರು: ಸಕ್ರಿಯ ಭಜರಂಗದಳ ಕಾರ್ಯಕರ್ತ ಆಗಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿ (32) ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ತಲವಾರಿನಲ್ಲಿ ಕೊಚ್ಚಿ ಕೊಲೆ ಮಾಡಿದೆ.
ಸುರತ್ಕಲ್ ನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಫಾಜಿಲ್ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಇದೀಗ ಕೊಲೆಯಾದವನು. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲವಾರು ದಾಳಿ ನಡೆಸಿದ್ದು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.
ಬಜಪೆ ಬಳಿಯ ಕಿನ್ನಿಪದವು ಎಂಬಲ್ಲಿ ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ. ಸುಹಾಸ್ ಶೆಟ್ಟಿ ತನ್ನ ಗೆಳೆಯರಾದ ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಎಂಬವರ ಜೊತೆಗೆ ಇನೋವಾ ಕಾರಿನಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಮೀನು ಸಾಗಾಟದ ಪಿಕಪ್ ವಾಹನದಲ್ಲಿ ಡಿಕ್ಕಿಯಾಗಿಸಿ ಅಡ್ಡ ಹಾಕಿದ್ದಾರೆ. ಪ್ರತೀಕಾರದ ಅರಿವಿಲ್ಲದ ಸುಹಾಸ್ ಶೆಟ್ಟಿ ಕಾರಿನಿಂದ ಇಳಿಯುತ್ತಿದ್ದಂತೆ 6-7 ಮಂದಿಯಿದ್ದ ಯುವಕರು ತಲವಾರಿನಲ್ಲಿ ಯದ್ವಾತದ್ವಾ ದಾಳಿ ನಡೆಸಿದ್ದಾರೆ.
ನಡುರಸ್ತೆಯಲ್ಲಿಯೇ ಕೃತ್ಯ ನಡೆದಿದ್ದು ಎಲ್ಲರೂ ನೋಡ ನೋಡುತ್ತಲೇ ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ. ಸುಹಾಸ್ ಜೊತೆಗಿದ್ದ ಒಂದಿಬ್ಬರ ಮೇಲೂ ದಾಳಿಯಾಗಿದ್ದು ತಲವಾರು ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ದಿನ ಹರತಾಳ (ಬಂದ್) ನಡೆಸುವಂತೆ ಕರೆ ಕೊಟ್ಟಿದೆ.
ಎಜೆ ಆಸ್ಪತ್ರೆಗೆ ಭೇಟಿ ನೀಡಿದ ವಿಹಿಂಪ ಮುಖಂಡ ಶರಣ್ ಪಂಪೈಲ್ ಕಾರ್ಯಕರ್ತರ ಹಾಗೂ ಸಂಘ ಪರಿವಾರ ಮುಂದಾಳುಗಳ ಜತೆ ಮಾತುಕತೆ ನಡೆಸಿದ ನಂತರ ಮಾದ್ಯಮಗಳ ಜತೆ ಈ ಮಾಹಿತಿಯನ್ನು ತಿಳಿಸಿದರು.
0 Comments