ಮಂಜೇಶ್ವರ : ಹವ್ಯಾಸ ಎಂದರೆ ಹಾಗೆ ಸುಮ್ಮನೆ ಕೂರಲು ಬಿಡದು ನವ ನವೀನ್ಯಾತೆಯ ಶೋಧವೇ ಕೆಲವರ ಅಭ್ಯಾಸ. ಹೀಗೆ ಒಲವಿನ ಹವ್ಯಾಸವೊಂದನ್ನು ಬೆಳೆಸಿಕೊಂಡು ಮುಂದುವರಿಸಿಕೊಂಡು ಬರುತ್ತಿರುವವರಲ್ಲಿ ಮಂಜೇಶ್ವರದ ಸ್ವರ್ಣೋದ್ಯಮಿಯಾದ ಮೌನೇಶ್ ಆಚಾರ್ಯರ ಕಲಾತ್ಮಕ ಕೈ ಚಳಕ ಮೂಕ ವಿಸ್ಮಿತಗೊಳಿಸುವಂತದ್ದಾಗಿದೆ. ಈ ಬಾರಿ ದೇಶ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವಾಗ ಮೌನೇಶ್ ಆಚಾರ್ಯರು ರಚಿಸಿದ ದೆಹಲಿಯ ಕೆಂಪುಕೋಟೆಯ ಪ್ರತಿಕೃತಿಯೊಂದು ಕಣ್ಮನ ಸೆಳೆಯುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಇವರು ತಮ್ಮ ಅಂಗಡಿಯಲ್ಲಿ ಉರಿಸಿ ಬಿಸಾಡುವ ಊದುಬತ್ತಿಯ ಕಡ್ಡಿಯಿಂದ ರಚಿಸುವ ಮಾದರಿಗಳು ನೋಡುಗರ ಗಮನ ಸೆಳೆಯುತ್ತಿದೆ. ಮೂಲತಃ ಕಡಂಬಾರು ನಿವಾಸಿಯಾದ ಇವರು ಕವಿಯೂ, ಚಿನ್ನ ಬೆಳ್ಳಿ ಕುಸುರಿ ಕೆಲಸಗಾರರೂ ಆಗಿದ್ದಾರೆ. ಹಾಗಾಗಿ ಕಣ್ಣಿಗೆ ಕಂಡದ್ದನ್ನೆಲ್ಲಾ ಕಲಾ ದೃಷ್ಠಿಯಿಂದ ತಯಾರಿಸುವ ನೈಪುಣ್ಯತೆ ಗಳಿಸಿಕೊಂಡಿದ್ದಾರೆ. ಸುಮಾರು 2ಸಾವಿರದಷ್ಟು ಊದು ಬತ್ತಿ ಕಡ್ಡಿಯ ಕಡೆ ತುಂಡುಗಳನ್ನು ಬಳಸಿ ಅವರು ಈ ಪ್ರತಿಕೃತಿಯನ್ನು ರಚಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇವರು ಇದೇ ರೀತಿ ರಚಿಸಿದ ಮೈಸೂರು ಅರಮನೆ, ಆಯೋಧ್ಯೆಯ ರಾಮ ಮಂದಿರ, ಶಬರಿಮಲೆ ಸನ್ನಿಧಾನದ ಪ್ರತಿಕೃತಿಗಳು ಕಲಾ ಪ್ರಿಯರ ಪ್ರಶಂಸನೆಗೆ ಪಾತ್ರವಾಗಿತ್ತು.
0 Comments