ಕಾಸರಗೋಡು : "ಶ್ರೀ ಕ್ಷೇತ್ರ ಧರ್ಮಸ್ಥಳ ಗೆಲ್ಗೆ" "ಡಾ. ಡಿ. ವೀರೇಂದ್ರ ಹೆಗ್ಗಡೆ ಬಾಳ್ಗೆ" ಘೋಷಣೆಯೊಂದಿಗೆ ಅಂತಾರಾಜ್ಯ ಖ್ಯಾತಿಯ ಹರಿಕೀರ್ತನಕಾರ, ದಾಸ ಸಂಕೀರ್ತನಕಾರ ಭಜನಾ ಗುರು ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಡಿ.22ರಂದು 12 ಗಂಟೆಗಳ ಕಾಲ ನಿರಂತರ "ಉದಯಾಸ್ತಮಾನ ಭಜನಾ ಸಂಕೀರ್ತನಾ ಗಾಯನ" ನಡೆಯಲಿದೆ.
ವಿಶ್ವದ ಪವಿತ್ರ ಕ್ಷೇತ್ರವೆಂದು ಗುರುತಿಸಲ್ಪಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು “ನಡೆದಾಡುವ ದೇವರು" ಎಂದು ಸಂಪ್ರಾರ್ಥಿಸುತ್ತಾರೆ. ಹೆಗ್ಗಡೆಯವರನ್ನು "ಖಾವಂದರೆಂದು" ಜನಮಾನಸದಲ್ಲಿ ಪೂಜಿಸುತ್ತಾ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ದೈವದ ಸೇವೆಯನ್ನು ನಿತ್ಯ ಕರ್ತವ್ಯದ ಮೂಲಕ ನಿರ್ವಹಿಸುವುದರೊಂದಿಗೆ, ಚತುರ್ದಾನಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ದಾನ-ಧರ್ಮಾದಿ ಸೇವಾ ಕಾರ್ಯಗಳಲ್ಲಿ ಕಾಲಕ್ಕೆ ಸರಿಯಾದ ಪರಿವರ್ತನೆಗಳೊಂದಿಗೆ 'ಗ್ರಾಮ ಭಾರತ' ಸಂಕಲ್ಪದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದಾರೆ.
ಈ ಕಾಲಘಟ್ಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎದುರಿಸುವ ಸಮಸ್ಯೆಗಳು, ಅನುಭವಿಸಿದ ಸಂಕಷ್ಟಗಳು, ದುಃಖಗಳನ್ನು ಜಯಿಸಿ ಬರುವುದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಸಂಪ್ರಾರ್ಥಿಸಿದ ಪ್ರಕಾರ, ಗಡಿನಾಡು ಕಾಸರಗೋಡು ಪ್ರದೇಶದ ಸರ್ವ ಭಕ್ತಜನರ ಸಮೂಹ ಪ್ರಾರ್ಥನೆಯಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 'ಹೊಸಬೆಳಕು' ಕಂಡುಕೊಳ್ಳುವ ಸಂದರ್ಭವನ್ನು ಗಮನಿಸಿ, ಜಯಾನಂದ ಕುಮಾರ್ ಹೊಸದುರ್ಗ ಅವರ ಸಂಕಲ್ಪದ ಪ್ರಕಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2025 ದಶಂಬರ್ 22 ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ನಿರಂತರ 12 ಗಂಟೆಗಳ ಕಾಲ ದೇವರ ನಾಮ, ಭಜನಾ, ದಾಸ ಸಂಕೀರ್ತನಾ ಗಾಯನದ ಮೂಲಕ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ, ಧರ್ಮ ಸಂಸ್ಕೃತಿಯು ವಿಶ್ವ ಮಟ್ಟದಲ್ಲಿ ಸದಾ ಬೆಳಗಲೆಂಬ ಆಶಯದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ

0 Comments