ಕಾಸರಗೋಡು : ಜಿಲ್ಲೆಯಲ್ಲಿ ನಿನ್ನೆ ನಡೆದ ಮತದಾನ ಮಧ್ಯಾಹ್ನದವರೆಗೆ ಮಂದಗತಿಯಲ್ಲಿ ಸಾಗಿದ್ದರೂ, ಮಧ್ಯಾಹ್ನ ಬಳಿಕ ಬಿರುಸುಗೊಂಡಿದ್ದು ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಹಲವೆಡೆ ನಕಲಿ ಮತದಾನಕ್ಕೆ ಯತ್ನಿಸಿದ ಘಟನೆಗಳು ವರದಿಯಾಗಿವೆ. ಕಾಸರಗೋಡಿನ ಚೂರಿಯಲ್ಲಿ ನಕಲಿ ಮತ ಚಲಾಯಿಸಲು ಯತ್ನಿಸಲಾಗಿದೆ. ಪೊಲೀಸರು ಬಂಧಿಸಲು ತೆರಳಿದಾಗ ಆರೋಪಿ ಪರಾರಿಯಾಗಿದ್ದಾನೆ. ಮಂಜೇಶ್ವರ ತಾಲೂಕಿನ ಪುತ್ತಿಗೆ ಪಂಚಾಯತಿನಲ್ಲಿ ಮತದಾನದ ಸಮಯ ಮುಗಿಯುವ 10 ನಿಮಿಷಗಳ ಮೊದಲು ಮತಗಟ್ಟೆಗೆ ನುಗ್ಗಿ ನಕಲಿ ಮತ ಚಲಾಯಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೇರೊಬ್ಬರ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಲು ಬಂದ ವ್ಯಕ್ತಿಯ ಬಗ್ಗೆ ಬಿಜೆಪಿ ಬೂತ್ ಏಜೆಂಟ್ ಅನುಮಾನ ವ್ಯಕ್ತಪಡಿಸಿದಾಗ ಅಲ್ಲಿದ್ದ ಜನರು ಆತನನ್ನು ತಡೆದರು. ನಂತರದ ತನಿಖೆಯಲ್ಲಿ ಆತ ನಿಜವಾದ ಮತದಾರನಲ್ಲ ಎಂದು ತಿಳಿದುಬಂದಿದೆ. ಪುತ್ತಿಗೆ ಪಂಚಾಯತ್‌ನ ಚೆನ್ನಿಕ್ಕೋಡಿ ವಾರ್ಡ್ 1 ರಲ್ಲಿರುವ ಧರ್ಮತ್ತಡ್ಕ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಬಂಧಿತ ವ್ಯಕ್ತಿ ಸಿಪಿಎಂ ಕಾರ್ಯಕರ್ತ ಎಂದು ಹೇಳಲಾಗುತ್ತದೆ. ಈ ಹಿಂದೆಯೂ ಇಲ್ಲಿ ವ್ಯಾಪಕವಾಗಿ ನಕಲಿ ಮತದಾನ ನಡೆದಿದೆ ಎಂಬ ಆಧಾರದ ಮೇಲೆ ಯುಡಿಎಫ್ ಚುನಾವಣಾ ಆಯೋಗಕ್ಕೆ ದೂರು ನೀಡಿದ ಹಿನ್ನಲೆಯಲ್ಲಿ ಪುತ್ತಿಗೆ ಪಂಚಾಯತಿನ ಮುಗು, ಪೆರ್ಲಾಡಂ , ಅಂಗಡಿಮೊಗರು ಮತ್ತು ಪೆರ್ಮುದೆ ಎಂಬೀ ಪ್ರದೇಶದ ಮತಗಟ್ಟೆಯಲ್ಲಿ ಕಣ್ಗಾವಲು ಕ್ಯಾಮೆರಾ ಅಳವಡಿಸುವಂತೆ ಚುನಾವಣಾ ಆಯೋಗ ಸೂಚಿಸಿತ್ತು. ಮಾತ್ರವಲ್ಲದೆ ಇಲ್ಲಿನ ಕೆಲವು ಪ್ರದೇಶಗಳ ವಾರ್ಡ್ ಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂದು ಯುಡಿಎಫ್ ಪುತ್ತಿಗೆ ಪಂಚಾಯತ್ ಸಮಿತಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಕಾಞಂಗಾಡ್‌ನ ಅಜಾನೂರ್ ನ ಮಡಿಯನ್ ಶಾಲೆಯಲ್ಲಿ ನಕಲಿ ಮತ ಚಲಾಯಿಸಲು ಯತ್ನಿಸಿದ ಸಿಪಿಎಂ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್‌ನ ಕರಿಂಬಾ ಪಂಚಾಯತ್‌ನಲ್ಲಿಯೂ ನಕಲಿ ಮತ ಚಲಾಯಿಸಲಾಗಿದೆ ಎಂಬ ಆರೋಪವಿದೆ. ತ್ರಿಶೂರ್‌ನ ಚೆಂತ್ರಪಿನ್ನಿಯ ಚಾಮಕ್ಕಲ ಎಡತಿರುತಿ ಗ್ರಾಮ ಪಂಚಾಯತ್‌ನ ವಾರ್ಡ್ 12 ರ ಚಾಮಕ್ಕಲ ಸರ್ಕಾರಿ ಮಾಪ್ಪಿಲಾ ಶಾಲೆಯ ಬೂತ್ ಸಂಖ್ಯೆ 1 ರಲ್ಲಿ ಮತದಾನಕ್ಕೆ ಅಡ್ಡಿ ಉಂಟಾಯಿತು. ವ್ಯಕ್ತಿಯೊಬ್ಬರು ಎರಡು ಮತಗಳನ್ನು ಚಲಾಯಿಸಿದ್ದಾರೆ ಎಂಬ ದೂರಿನ ಕಾರಣ ಮತದಾನವನ್ನು ನಿಲ್ಲಿಸಲಾಗಿತ್ತು. ಕೊನೆಗೆ ಚುನಾವಣಾಧಿಕಾರಿ ಸ್ಥಳಕ್ಕೆ ತಲುಪಿ ಸಮಸ್ಯೆಯನ್ನು ಪರಿಹರಿಸಿದರು.

0 Comments