ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಕ್ರಿಸ್‌ಮಸ್ ದೇವರ ಮಗ ಮತ್ತು ಮಾನವೀಯತೆಯ ವಿಮೋಚಕ ಎಂದು ಪೂಜಿಸಲ್ಪಟ್ಟ ಯೇಸುವಿನ ಜನ್ಮದಿನವನ್ನು ಆಚರಿಸುವ ಪವಿತ್ರ ದಿನವಾಗಿದೆ. ಈ ದಿನದಂದು ದೇವರು ತಮ್ಮ ಜೀವಗಳನ್ನು ಉಳಿಸಲು ಮತ್ತು ಪಾಪ ಕರ್ಮಗಳಿಂದ ರಕ್ಷಿಸಲು ಭೂಮಿಗೆ ಬಂದಿದ್ದಾನೆ ಎಂದು ನಂಬಲಾಗಿದ್ದು ಕ್ರೈಸ್ತ ಸಮುದಾಯದ ಜನರು ಏಸುಕ್ರಿಸ್ತರ ಸತ್ಕಾರ್ಯಗಳ ಸ್ಮರಣೆಯೊಂದಿಗೆ ಈ ಹಬ್ಬದ ಆಚರಣೆಯನ್ನು ಮಾಡುತ್ತಾರೆ. ಈ ದಿನ ಬಹುತೇಕ ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಸಾರ್ವಜನಿಕ ಮತ್ತು ಧಾರ್ಮಿಕ ರಜಾದಿನವಾಗಿದೆ. ಇಸ್ರೇಲ್, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ಜಪಾನ್, ಚೈನಾ, ಈಜಿಪ್ಟ್, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ಬಹುತೇಕ ದೇಶಗಳು ಪ್ರತಿವರ್ಷ ಕ್ರಿಸ್‌ಮಸ್ ಹಬ್ಬವನ್ನು ಆಚರಿಸುತ್ತವೆ.
ಕ್ರಿಸ್ಮಸ್ ಪದವು “ಮಾಸ್ ಆಫ್ ಕ್ರೈಸ್ಟ್” ಎಂಬ ಪದದಿಂದ ಹುಟ್ಟಿಕೊಂಡಿದ್ದು, ವಿಭಿನ್ನ ಹೆಸರುಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಜರ್ಮನಿಯಲ್ಲಿ ಯುಲೆಟೈಡ್, ಸ್ಪ್ಯಾನಿಷ್‌ನಲ್ಲಿ ನವಿಡಾಡ್, ಇಟಾಲಿಯನ್‌ನಲ್ಲಿ ನಟಾಲ್ ಮತ್ತು ಫ್ರೆಂಚ್‌ನಲ್ಲಿ ನೋಯೆಲ್ ಎಂದು ಕರೆಯಲಾಗುತ್ತದೆ. ಯೇಸುವಿನ ನಿಖರವಾದ ಜನ್ಮದಿನಾಂಕ ಯಾರಿಗೂ ತಿಳಿದಿಲ್ಲ. ಆದರೆ 137 CE ನಲ್ಲಿ ರೋಮ್‌ನ ಬಿಷಪ್ ಕ್ರಿಸ್ತನ ಮಗುವಿನ ಜನ್ಮದಿನವನ್ನು ಗಂಭೀರ ಹಬ್ಬವಾಗಿ ಆಚರಿಸಲು ಆದೇಶಿಸಿದರು. ಕ್ರಿ.ಶ 350 ರಲ್ಲಿ ಜೂಲಿಯಸ್ I ಎಂಬ ಹೆಸರಿನ ಇನ್ನೊಬ್ಬ ರೋಮನ್ ಬಿಷಪ್ ಡಿಸೆಂಬರ್ 25 ಅನ್ನು ಕ್ರಿಸ್‌ಮಸ್ (ಮಾಸ್ ಆಫ್ ಕ್ರೈಸ್ಟ್) ಆಚರಣೆಯ ದಿನವನ್ನಾಗಿ ಆಯ್ಕೆ ಮಾಡಿದರು ಎಂಬುದಾಗಿ ತಿಳಿದು ಬರುತ್ತದೆ. ಮೊದಲ ಕ್ರಿಶ್ಚಿಯನ್ ಚಕ್ರವರ್ತಿ ರೋಮನ್ ಚಕ್ರವರ್ತಿ ತನ್ನ ಆಳ್ವಿಕೆಯಲ್ಲಿ ಕ್ರಿಸ್ಮಸ್ನ್ನು ಮೊಟ್ಟಮೊದಲ ಬಾರಿಗೆ ಆಚರಿಸಿದನು. ಮೊದಲ ಕ್ರಿಸ್‌ಮಸ್ ಹಬ್ಬವನ್ನು ರೋಮ್ನಲ್ಲಿ 336 AD ನಲ್ಲಿ ಆಚರಿಸಲಾಯಿತು. 300ರ ದಶಕದಲ್ಲಿ ಏರಿಯನ್ ವಿವಾದದಿಂದಾಗಿ ಕ್ರಿಸ್‌ಮಸ್ ಆಚರಣೆ ಬಹಳ ಸಮಯದವರೆಗೆ ನಿಂತಿತ್ತು. ತದನಂತರ ಕ್ರಿ.ಶ.800ರ ಸುಮಾರಿಗೆ ಕ್ರಿಸ್‌ಮಸ್ ಆಚರಣೆ ಜನರನ್ನು ಗಮನ ಸೆಳೆಯಿತು. 1660 ರಲ್ಲಿ ಕ್ರಿಸ್ಮಸ್ ಅನ್ನು ರಜಾದಿನವನ್ನಾಗಿ ಪರಿಗಣಿಸಲಾಯಿತು. 1900ರ ದಶಕದ ಆರಂಭದಲ್ಲಿ ಆಂಗ್ಲಿಕನ್ ಕಮ್ಯುನಿಯನ್ ಚರ್ಚ್‌ನ ಆಕ್ಸ್‌ಫರ್ಡ್ ಚಳವಳಿಯು ಕ್ರಿಸ್‌ಮಸ್‌ನ ಪುನರುಜ್ಜೀವನಕ್ಕೆ ಕಾರಣವಾಯಿತು. ಈಗ ಪ್ರಪಂಚದಾದ್ಯಂತ ಇತರ ಹಬ್ಬಗಳಂತೆ ಕ್ರಿಸ್‌ಮಸ್ ಅನ್ನು ಪ್ರತಿ ವರ್ಷವೂ ಡಿಸೆಂಬರ್ 25 ರಂದು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.
ಯೇಸು ಮನುಕುಲಕ್ಕೆ ಪ್ರೀತಿ, ಕ್ಷಮೆ, ಕರುಣೆ, ತ್ಯಾಗ ಮತ್ತು ಶಾಂತಿಯ ಸಂದೇಶವನ್ನು ನೀಡಿದರು. ಆದ್ದರಿಂದ, ಕ್ರಿಸ್‌ಮಸ್ ಕೇವಲ ಆಚರಣೆಯಲ್ಲ, ಮಾನವೀಯ ಮೌಲ್ಯಗಳನ್ನು ನೆನಪಿಸುವ ದಿನವಾಗಿದೆ. ಕ್ರಿಸ್ ಮಸ್ ನ ಪ್ರತ್ಯೇಕ ಆಕರ್ಷಣೆಯೆಂದರೆ ಸಾಂತಾಕ್ಲಾಸ್. ಸಾಂತಾಕ್ಲಾಸ್ ಎಂದರೆ ಮಕ್ಕಳ ಮುಖದಲ್ಲಿ ಸಂತೋಷ, ನಗುವಿನ ಹೊಳಪು ಎದ್ದು ಕಾಣುತ್ತದೆ. ಆದ್ದರಿಂದ, ಸಾಂತಾಕ್ಲಾಸ್ ಅನ್ನು ಚೈತನ್ಯ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಾಂತಾಕ್ಲಾಸ್‌ನ ಪರಿಕಲ್ಪನೆಯು 4ನೇ ಶತಮಾನದ ಕ್ರಿಶ್ಚಿಯನ್ ಸಂತ ನಿಕೋಲಸ್‌ನಿಂದ ಹುಟ್ಟಿಕೊಂಡಿತು. ನಿಕೋಲಸ್ ಒಬ್ಬ ಸಂತನಾಗಿದ್ದು, ಬಡವರು, ಅನಾಥರು ಮತ್ತು ನಿರ್ಗತಿಕರಿಗೆ, ವಿಶೇಷವಾಗಿ ಮಕ್ಕಳಿಗೆ ರಹಸ್ಯವಾಗಿ ಸಹಾಯ ಮಾಡುತ್ತಿದ್ದನು. ಯಾರಿಗೂ ತಿಳಿಯದಂತೆ ರಾತ್ರಿಯಲ್ಲಿ ಉಡುಗೊರೆಗಳನ್ನು ತಲುಪಿಸುತ್ತಿದ್ದರಿಂದ ಈ ಕಥೆ ಜನರಲ್ಲಿ ಜನಪ್ರಿಯವಾಯಿತು. ಯುರೋಪ್‌ನಲ್ಲಿ, ಸಂತ ನಿಕೋಲಸ್ ಅವರನ್ನು ಸಿಂಟರ್‌ಕ್ಲಾಸ್ ಎಂದು ಕರೆಯಲಾಗುತ್ತಿತ್ತು. ನಂತರ, ಈ ಹೆಸರು ಅಮೆರಿಕವನ್ನು ತಲುಪಿ ಸಾಂತಾಕ್ಲಾಸ್ ಆಗಿ ಮಾರ್ಪಟ್ಟಿತು. ಸಾಂತಾಕ್ಲಾಸ್‌ನ ಚಿತ್ರಣವು 1800 ರ ದಶಕದಲ್ಲಿ ಅಭಿವೃದ್ಧಿಗೊಂಡಿತು. 1822 ರಲ್ಲಿ ಕ್ಲೆಮೆಂಟ್ ಸಿ. ಮೂರ್ " ಎ ವಿಸಿಟ್ ಫ್ರಮ್ ಸೇಂಟ್ ನಿಕೋಲಸ್" ಎಂಬ ಕವಿತೆಯನ್ನು ಬರೆದರು. ಈ ಕವಿತೆಯನ್ನು 'ಟ್ವಾಸ್ ದಿ ನೈಟ್ ಬಿಫೋರ್ ಕ್ರಿಸ್‌ಮಸ್' ಎಂದು ಕರೆಯಲಾಗುತ್ತದೆ. ಇದು ಬಿಳಿ ಗಡ್ಡವನ್ನು ಹೊಂದಿರುವ ದುಂಡುಮುಖದ, ಹರ್ಷಚಿತ್ತದಿಂದ ಕೂಡಿದ, ಗುಲಾಬಿ-ಕೆನ್ನೆಯ ಮುದುಕನನ್ನು ವಿವರಿಸುತ್ತದೆ. ಎಂಟು ಹಿಮಸಾರಂಗಗಳು ಎಳೆಯುವ ತನ್ನ ಜಾರುಬಂಡಿಯಲ್ಲಿ ಅವನು ಗಾಳಿಯಲ್ಲಿ ಹಾರುತ್ತಾನೆ. ಅವನು ಚಿಮಣಿಗಳನ್ನು ಹತ್ತಿ ಮಕ್ಕಳಿಗೆ ಉಡುಗೊರೆಗಳನ್ನು ಬಿಡುತ್ತಾನೆ. 1863 ರಲ್ಲಿ ಥಾಮಸ್ ನಾಸ್ಟ್ ಎಂಬ ಅಮೇರಿಕನ್ ವ್ಯಂಗ್ಯಚಿತ್ರಕಾರ ಮೂರ್ ಅವರ ಈ ಕವಿತೆಯನ್ನು ಆಧರಿಸಿ ಸಾಂತಾಕ್ಲಾಸ್‌ನ ಚಿತ್ರಗಳನ್ನು ಚಿತ್ರಿಸಲು ಪ್ರಾರಂಭಿಸಿದನು. ನಾಸ್ಟ್, ಸಾಂತಾಗೆ ಬಿಳಿ ತುಪ್ಪಳ ಟ್ರಿಮ್ ಹೊಂದಿರುವ ತನ್ನ ಕೆಂಪು ಸೂಟ್ ಅನ್ನು ನೀಡಿದರು. ಕಾಲಾನಂತರದಲ್ಲಿ, ಸಾಂತಾಕ್ಲಾಸ್‌ನ ಗುರುತು ಕೆಂಪು ಸೂಟ್, ಬಿಳಿ ಗಡ್ಡ, ನಗುತ್ತಿರುವ ಮುಖ ಮತ್ತು ಉಡುಗೊರೆಗಳ ಚೀಲವಾಗಿ ಬೆಳೆಯಿತು. ಮನೆಮನೆಗೂ ಭೇಟಿ ನೀಡುವ ಸಾಂತಾಕ್ಲಾಸ್ ಮಕ್ಕಳು ಹಿರಿಯರೆಂಬ ಭೇದವಿಲ್ಲದೆ ಎಲ್ಲರಲ್ಲೂ ನಗುವನ್ನು ಮೂಡಿಸುತ್ತಾನೆ.
ಬಡವ ಶ್ರೀಮಂತರೆನ್ನದೆ ಎಲ್ಲರೂ ಒಟ್ಟಾಗಿ ಸಡಗರ, ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಮುನ್ನಾ ದಿನ ಕ್ರಿಸ್ ಮಸ್ ಈವ್ ಎಂಬುದಾಗಿ ತಿಳಿಯಲ್ಪಡುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಕ್ರಿಸ್‌ಮಸ್ ಟ್ರೀ ಇಡುತ್ತಾರೆ ಮತ್ತು ಅದನ್ನು ವಿದ್ಯುತ್ ದೀಪಗಳು, ಉಡುಗೊರೆಗಳು, ಆಕಾಶಬುಟ್ಟಿಗಳು, ಹೂವುಗಳು, ಆಟಿಕೆಗಳು, ಹಸಿರು ಎಲೆಗಳು ಮತ್ತು ಇತರ ವಸ್ತುಗಳಿಂದ ಅಲಂಕರಿಸುತ್ತಾರೆ. ಕ್ರಿಸ್ಮಸ್ ಮರವು ತುಂಬಾ ಸುಂದರ ಮತ್ತು ಆಕರ್ಷಕವಾಗಿ ಕಾಣುತ್ತದೆ. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು, ಸ್ತೋತ್ರಗಳು ಮತ್ತು ಬೈಬಲ್ ಪಠಣಗಳು ನಡೆಯುತ್ತವೆ. ಹಬ್ಬದಂದು ವಿಶೇಷ ಸಿಹಿ ತಿಂಡಿಗಳು ಮತ್ತು ಭಕ್ಷ್ಯಗಳನ್ನು ತಯಾರಿಸಿ ಹಂಚಿಕೊಳ್ಳಲಾಗುತ್ತದೆ. ಮಕ್ಕಳು ಈ ದಿನಕ್ಕಾಗಿ ಬಹಳ ಉತ್ಸಾಹದಿಂದ ಕಾಯುತ್ತಾರೆ ಏಕೆಂದರೆ ಅವರಿಗೆ ಸಾಕಷ್ಟು ಉಡುಗೊರೆಗಳು ಮತ್ತು ಚಾಕೊಲೇಟ್‌ಗಳು ಸಿಗುತ್ತವೆ. ಪೋಷಕರು, ನೆರೆಹೊರೆಯವರು, ಸ್ನೇಹಿತರು ಮತ್ತು ಹಿತೈಷಿಗಳು ಮಕ್ಕಳಿಗೆ ಬಹಳಷ್ಟು ಉಡುಗೊರೆಗಳನ್ನು ಕೊಡುತ್ತಾರೆ. ಈ ಹಿಂದೆ ಕ್ರಿಸ್ಮಸ್ ಗೆ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕ್ರಿಸ್ಮಸ್ ಕಾರ್ಡ್ ಗಳನ್ನು ನೀಡುವುದು ಸಂಪ್ರದಾಯವಾಗಿತ್ತು. ಇದೀಗ ಆದುನಿಕ ತಂತ್ರಜ್ಞಾನದ ನಡುವೆ ಸ್ನೇಹ ವಿನಿಮಯ ಮರೆಯಾಗುತ್ತಿದ್ದರೂ ಸ್ನೇಹ ಪ್ರೀತಿ ಕಾರುಣ್ಯದ ಹಬ್ಬ ಆಚರಣೆ ಸಂಭ್ರಮಯುತವಾಗಿಯೇ ಜರಗುತ್ತಿದೆ. ನಮ್ಮ ಎಲ್ಲಾ ವಾಚಕರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.



0 Comments