ಪೈವಳಿಕೆ : ನಾಡಿನ ಹಿರಿಮೆ ಸಾರುವ ಹಳೆಯ ಕನ್ನಡ ಮಾಧ್ಯಮ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿರುವ ಸರ್ಕಾರಿ ಉನ್ನತ ಪ್ರೌಢಶಾಲೆ ಪೈವಳಿಕೆ ಕಾಯರ್ ಕಟ್ಟೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾದ 'ಕಾಯರ್ ಕಟ್ಟೆ ಕಲರವ' ಎರಡು ದಿನಗಳ ಬೇಸಗೆ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು. ಪೈವಳಿಕೆ ಪಂಚಾಯತ್ ಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಶಿಬಿರವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಹಾಗೂ ಅವರಿಗೆ ವೈವಿಧ್ಯಮಯ ಅನುಭವಗಳನ್ನು ನೀಡುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲರಾದ ಪಿ.ಎನ್. ಮೂಡಿತ್ತಾಯ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಇಂತಹ ಶಿಬಿರಗಳ ಅಗತ್ಯತೆಯನ್ನು ಒತ್ತಿ ಹೇಳಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವ ಚೇರಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡೊಮನಿಕ್ ಆಗಸ್ಟಿನ್, ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮಿ ಹಾಗೂ ರಂಗ ನಿರ್ದೇಶಕ ಉದಯ ಸಾರಂಗ್ ಅವರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ನಿವೃತ್ತ ಉಪ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹರೀಶ್ ಕುಮಾರ್ ಬಿ. ವಂದಿಸಿ, ಅಧ್ಯಾಪಕ ಅಶ್ರಫ್ ಮರ್ತ್ಯ ಅವರು ನಿರೂಪಿಸಿದರು.
ಎರಡು ದಿನಗಳ ಕಾಲ ನಡೆದ ಈ ಶಿಬಿರವು ಕೇವಲ ತರಗತಿಗಳಿಗೆ ಸೀಮಿತವಾಗದೆ, ಜ್ಞಾನದ ಹಬ್ಬವಾಗಿ ಮಾರ್ಪಟ್ಟಿತ್ತು. ರಂಗ ಶಿಬಿರ, ಚಿತ್ರಕಲೆ, ಸಂಗೀತ, ಜುಂಬಾ ಡ್ಯಾನ್ಸ್, ವ್ಯಕ್ತಿತ್ವ ವಿಕಸನ, ಭಾಷಣ ಕಲೆ, ಕಸದಿಂದ ರಸ ನಿರ್ಮಾಣ, ವೃತ್ತಿ ಪರಿಚಯ, ಕ್ರೀಡಾ ತರಬೇತಿ ಹಾಗೂ ವಿಜ್ಞಾನ ವಿಸ್ಮಯಗಳಂತಹ ಹತ್ತಾರು ವಿಷಯಗಳ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಉದಯ ಸಾರಂಗ್, ದಿವಾಕರ ಬಲ್ಲಾಳ್, ಪ್ರಕಾಶ್ ಕುಂಬಳೆ, ಪಿ.ಎನ್. ಮೂಡಿತ್ತಾಯ, ಶ್ರೀಕುಮಾರಿ ಟೀಚರ್, ಕೆ.ಎಂ. ಬಲ್ಲಾಳ್, ರಕ್ಷಿತಾ ಹಾಗೂ ಸಪ್ತಮಿ ಅವರು ಶಿಬಿರಾರ್ಥಿಗಳೊಂದಿಗೆ ಆಪ್ತವಾಗಿ ಸಂವಹನ ನಡೆಸಿ ಮಾರ್ಗದರ್ಶನ ನೀಡಿದರು. ನಿವೃತ್ತ ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾದ ಇಬ್ರಾಹಿಂ ಬಿ ಹಾಗೂ ನಂದಿಕೇಶನ್ ಅವರು ಶಿಬಿರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಹಳೆ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಹೆತ್ತವರು ಒಂದಾಗಿ ಕೈಜೋಡಿಸಿ ನಡೆಸಿದ ಈ ಕಾರ್ಯಕ್ರಮವು ಒಂದು ಮಾದರಿ ಹೆಜ್ಜೆಯಾಗಿ ಗುರುತಿಸಲ್ಪಟ್ಟಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಇದೊಂದು ಮರೆಯಲಾಗದ ನವ್ಯ ಅನುಭವವನ್ನು ನೀಡಿತಲ್ಲದೆ, ಶಾಲೆಯೊಂದರ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಸಮಾಜಕ್ಕೆ ಸಾರುವಂತಾಯಿತು. ಸುಗಮವಾಗಿ ಮತ್ತು ಶಿಸ್ತುಬದ್ಧವಾಗಿ ಸಂಘಟಿಸಲ್ಪಟ್ಟ ಈ ಶಿಬಿರವು ಶಿಕ್ಷಣ ಮತ್ತು ಸಂಸ್ಕೃತಿಯ ಅಪೂರ್ವ ಸಮ್ಮಿಲನವಾಗಿ ಮೂಡಿಬಂದಿದೆ.

.jpeg)
0 Comments