ತಿರುವನಂತಪುರ : ಭಾಷಾ ಸಾಮರಸ್ಯದ ಗಡಿನಾಡು ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕೇರಳ ವಿಧಾನಸಭೆಯಲ್ಲಿ ಜಗದ್ಗುರು ಬಸವಣ್ಣನವರ ವಿಶ್ವವಿಖ್ಯಾತ ವಚನವನ್ನು ಉಲ್ಲೇಖಿಸುವ ಮೂಲಕ ಸದನದ ಗಮನ ಸೆಳೆದಿದ್ದಾರೆ. ಮಾನವೀಯತೆ, ಸಮಾನತೆ ಮತ್ತು ಸಹೋದರತೆಯ ಸಂದೇಶ ಸಾರುವ ಶರಣರ ವಾಣಿ ಇದೀಗ ಕೇರಳ ಶಾಸನಸಭೆಯಲ್ಲೂ ಮಾರ್ದನಿಸಿದ್ದು, ಇದಕ್ಕೆ ಆಡಳಿತ ಪಕ್ಷದ ಶಾಸಕರು ಕೂಡ ಮೇಜು ತಟ್ಟಿ ಅಭಿನಂದಿಸಿರುವುದು ಕನ್ನಡಿಗರಲ್ಲಿ ಅಪಾರ ಹೆಮ್ಮೆ ಮೂಡಿಸಿದೆ.
ವಿಧಾನಸಭಾ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಸಾಮಾಜಿಕ ಬದ್ಧತೆ ಮತ್ತು ಸಮಾಜದ ಎಲ್ಲ ವರ್ಗಗಳ ಒಗ್ಗಟ್ಟಿನ ಕುರಿತು ಮಾತನಾಡಿದ ಶಾಸಕ ಅಶ್ರಫ್ ಅವರು, ಬಸವಣ್ಣನವರ ಈ ಪ್ರಸಿದ್ಧ ವಚನ ಸಾಲುಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಉಲ್ಲೇಖಿಸಿ, ಸಹೋದರತೆ ಹಾಗೂ ಮಾನವೀಯತೆಯ ಮಹತ್ವವನ್ನು ಪ್ರತಿಪಾದಿಸಿದರು:
"ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ,
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ.
ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ."
ಜಾತಿ, ಮತ, ಭಾಷೆಗಳ ಬೇಲಿಗಳನ್ನು ದಾಟಿ ಎಲ್ಲರನ್ನೂ 'ನಮ್ಮವರು' ಎಂದು ಅಪ್ಪಿಕೊಳ್ಳುವ ಈ ವಚನದ ವಿಶ್ವದೀಪ್ತ ಆಶಯವನ್ನು ಶಾಸಕರು ಸದನದ ಮುಂದಿಟ್ಟಾಗ, ಇಡೀ ಸದನವೇ ಮೇಜು ತಟ್ಟಿ ಶ್ಲಾಘನೆ ವ್ಯಕ್ತಪಡಿಸಿತು. ಈ ಮೂಲಕ ಬಸವಣ್ಣನವರ ವಾಣಿ ಕೇರಳ ಶಾಸನಸಭೆಯ ಇತಿಹಾಸದ ಪುಟಗಳಲ್ಲಿ ಸೇರುವಂತಾಯಿತು.
ನುಡಿದರೆ ಮುತ್ತಿನ ಹಾರ ದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿ ಯಂತಿರಬೇಕು,
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು,
ಎಂಬ ಇನ್ನೊಂದು ಸಾಲು ನುಡಿದಂತೆ ನಡೆದ ಐಕ್ಯರಂಗ ಸರಕಾರದ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಕಾರ್ಯ ವೈಖರಿಗೊಂದು ಕೈಗನ್ನಡಿಯಂತೆ ಹೊರ ಹೊಮ್ಮಿತ್ತು. ಚುನಾವಣಾ ಪೋರ್ವೊತ್ತರವಾಗಿ ಯುಡಿಎಫ್ ನೀಡಿದ ಐದು ಗ್ಯಾರಂಟಿಯ ಆಶ್ವಾಸನೆಯನ್ನು ಇದೀಗ ವಿಧಾನಸಭಾ ಆಧಿವೇಶನದಲ್ಲಿ ಈಡೇರಿಸಲು ಪ್ರಯತ್ನಿಸುವ ಮುಖ್ಯಮಂತ್ರಿಗಳ ಸ್ಪಟಿಕದ ಮಾತಿಗೆ ಸಮಭಾವವಾಗಿಸಿತು ಎಂಬುದು ರಾಜಕೀಯ ವಿಮರ್ಶಕರ ಅಭಿಪ್ರಾಯವಾಗಿದೆ.
ಭಾಷಾ ಬಾಂಧವ್ಯದ ಹೆಮ್ಮೆಯ ನಾಯಕ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಷೆಗಳ ಮತ್ತು ಸಂಸ್ಕೃತಿಗಳ ಸಂಗಮ ಭೂಮಿಯಾದ ಮಂಜೇಶ್ವರ ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿಯಾಗಿ ಭರ್ಜರಿ ಗೆಲುವು ಸಾಧಿಸಿದ್ದ ಎ.ಕೆ.ಎಂ. ಅಶ್ರಫ್ ಅವರು, ಆರಂಭದಿಂದಲೇ ತಮ್ಮ ವಿಶಿಷ್ಟ ಶೈಲಿಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
ಕನ್ನಡದಲ್ಲೇ ಪ್ರಮಾಣ ವಚನ :
ಕೇರಳ ವಿಧಾನಸಭೆಯ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಯಾಗಿ, ಶಾಸನಸಭೆಯೊಳಗೆ ಕನ್ನಡ ಭಾಷೆಯಲ್ಲೇ ಸತ್ಯಪ್ರತಿಜ್ಞೆ ಮಾಡುವ ಮೂಲಕ ಅವರು ಇಡೀ ಕರ್ನಾಟಕ ಮತ್ತು ಗಡಿನಾಡ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದರು.ಸ್ವತಃ ಕನ್ನಡಿಗರಾದ ಅಶ್ರಫ್ ಅವರು, ಭಾಷೆಯ ಮೇಲಿನ ಅಪ್ಪಟ ಅಭಿಮಾನ ಮತ್ತು ಸಾಹಿತ್ಯದ ಜ್ಞಾನವನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ. ಕೇವಲ ವೇದಿಕೆಗಳಿಗಷ್ಟೇ ತಮ್ಮ ಕನ್ನಡ ಪ್ರೇಮವನ್ನು ಸೀಮಿತಗೊಳಿಸದ ಶಾಸಕರು, ತಮ್ಮ ಸ್ವಂತ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೇ ಸೇರಿಸುವ ಮೂಲಕ ಮಾತೃಭಾಷಾ ಶಿಕ್ಷಣಕ್ಕೆ ಪ್ರಾಯೋಗಿಕ ಬೆಂಬಲ ನೀಡಿದ್ದಾರೆ. ಇದು ಅವರ ಭಾಷಾ ಬದ್ಧತೆಗೆ ಅತ್ಯುತ್ತಮ ನಿದರ್ಶನ.
ಕ್ಷೇತ್ರದ ಯಾವುದೇ ಕಾರ್ಯಕ್ರಮವಿರಲಿ, ಅಲ್ಲಿ ನಿರರ್ಗಳವಾಗಿ ಕನ್ನಡ, ತುಳು, ಮಲಯಾಳದಲ್ಲಿ ಮಾತನಾಡುತ್ತಾ ಸಾರ್ವಜನಿಕರೊಂದಿಗೆ ನೇರ ಒಡನಾಟ ಹೊಂದುವುದು ಅಶ್ರಫ್ ಅವರ ದಿನಚರಿಯಾಗಿದೆ. ಗಡಿನಾಡಿನ ಕನ್ನಡಿಗರ ಹಕ್ಕುಗಳು, ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಜನಪರ ವಿಷಯಗಳಲ್ಲಿ ಅವರು ತೋರುತ್ತಿರುವ ನಿರಂತರ ಕಾಳಜಿ ಮತ್ತು ಶ್ರಮ ಅವರನ್ನು ಕೇರಳದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಿ ಶಾಸಕರನ್ನಾಗಿ ಮಾಡಿದೆ.
ಕೇರಳದ ಉನ್ನತ ಶಾಸನಸಭೆಯೊಳಗೆ ಬಸವಣ್ಣನವರ ವಚನವನ್ನು ಪ್ರಸ್ತಾಪಿಸಿ, ಆಡಳಿತ ಪಕ್ಷದ ಸದಸ್ಯರಿಂದಲೂ ಜಯಘೋಷ ಹಾಗೂ ಮೇಜು ತಟ್ಟುವ ಮೂಲಕ ಮೆಚ್ಚುಗೆ ಗಳಿಸಿದ ಶಾಸಕ ಎ.ಕೆ.ಎಂ. ಅಶ್ರಫ್ ಅವರು, ಕೇವಲ ಮಂಜೇಶ್ವರದ ಧ್ವನಿಯಾಗಿಯಷ್ಟೇ ಅಲ್ಲದೆ, ಭಾಷೆ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದ ಸಾಂಸ್ಕೃತಿಕ ರಾಯಭಾರಿಯಾಗಿ ಹೊರಹೊಮ್ಮಿದ್ದಾರೆ. ಇವರ ಈ ನಡೆಗೆ ಗಡಿನಾಡಿನಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

0 Comments