Ticker

6/recent/ticker-posts

Ad Code

ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಳಿಯ ಮಾಜಿ ಸಚಿವ ರಿಯಾಸ್ ಮನೆ ಸಹಿತ 12 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಇಡಿ ದಾಳಿ

ತಿರುವನಂತಪುರ : ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಕಣ್ಣೂರಿನಲ್ಲಿರುವ ಅವರ ಮನೆ ಮತ್ತು ತಿರುವನಂತಪುರಂ ಬೇಕರಿ ಜಂಕ್ಷನ್‌ನಲ್ಲಿರುವ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಮಾಜಿ ಮುಖ್ಯಮಂತ್ರಿಯ ಪುತ್ರಿ ವೀಣಾ ವಿಜಯನ್ ಅವರ ಕಂಪೆನಿಯ ಮಾಸಿಕ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ಇಡಿ ತನಿಖೆಯನ್ನು ಮುಂದುವರಿಸಬಹುದು ಎಂದು ನ್ಯಾಯಾಲಯ ನಿನ್ನೆ ಸ್ಪಷ್ಟಪಡಿಸಿದ ಬೆನ್ನಲ್ಲೆ ಇಂದು ಬೆಳಿಗ್ಗೆ ತಿರುವನಂತಪುರಂನಲ್ಲಿರುವ ಪಿಣರಾಯಿ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿದಾಗ, ಪಿಣರಾಯಿ, ಅವರ ಪುತ್ರಿ ವೀಣಾ ಮತ್ತು ಕುಟುಂಬ ಸದಸ್ಯರು ಮನೆಯಲ್ಲಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ವೀಣಾ ಅವರ ಪತಿ, ಮಾಜಿ ಸಚಿವ ಮೊಹಮ್ಮದ್ ರಿಯಾಸ್, CMRL ನ ವ್ಯವಸ್ಥಾಪಕಿ ಶಶಿಧರನ್ ಕರ್ತಾ ಮತ್ತು ಹಿರಿಯ ವ್ಯವಸ್ಥಾಪಕ ಚಂದ್ರಶೇಖರನ್ ಅವರ ಮನೆಗಳು ಹಾಗೂ CMRL ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಮುಖ್ಯ ಆರೋಪವೆಂದರೆ CMRL ವೀಣಾ ಅವರ ಐಟಿ ಕಂಪನಿ ಎಕ್ಸಲಾಜಿಕ್‌ಗೆ ಅಕ್ರಮವಾಗಿ ಭಾರಿ ಮೊತ್ತವನ್ನು ಪಾವತಿಸಿದೆ. ಯಾವುದೇ ಐಟಿ ಸೇವೆಗಳನ್ನು ಒದಗಿಸದೆ CMRL ವೀಣಾಗೆ 1.72 ಕೋಟಿ ರೂ.ಗಳನ್ನು ಏಕೆ ಪಾವತಿಸಿದೆ ಎಂಬುದರ ಕುರಿತು ED ಮುಖ್ಯವಾಗಿ ತನಿಖೆ ನಡೆಸುತ್ತಿದೆ. ವೀಣಾ ವಿಜಯನ್ ಒಳಗೊಂಡ ಮಾಸಿಕ ಕಂತು ಪ್ರಕರಣದಲ್ಲಿ ED ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಅಲುವಾದ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ಸ್ ಲಿಮಿಟೆಡ್ (CMRL) ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯವು ನಿನ್ನೆ ಈ ಅರ್ಜಿಯನ್ನು ವಜಾಗೊಳಿಸಿದೆ. ಗಂಭೀರ ವಂಚನೆ ತನಿಖಾ ಕಚೇರಿಯೂ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ವಿಷಯದ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು SFIO ಈ ಹಿಂದೆ ತನಿಖೆ ನಡೆಸಿದ್ದವು. ಈ ತನಿಖೆಯ ಸಮಯದಲ್ಲಿ, SFIO ಪಾವತಿಸಿದ ಮೊತ್ತಕ್ಕೆ ಪ್ರತಿಯಾಗಿ ವೀಣಾ ಅವರ ಸಂಸ್ಥೆಯು ಯಾವುದೇ ಸೇವೆಗಳನ್ನು ಒದಗಿಸಿಲ್ಲ ಎಂದು ಕಂಡುಬಂದಿದೆ. ಇದೀಗ ನಡೆಯುತ್ತಿರು ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಪಿಣರಾಯಿ ಅಭಿಮಾನಿಗಳು ಮತ್ತು ಎಡರಂಗದ ಬೆಂಬಲಿಗರು ಪ್ರತಿಭಟನೆಗಿಳಿದಿದ್ದಾರೆ. ಇದೇ ವೇಳೆ ದಾಳಿಯ ಬಗ್ಗೆ ಮಾಜಿ ಸಚಿವ ರಿಯಾಸ್ ಆಕ್ರೋಶ ವ್ಯಕ್ತಪಡಿಸಿದ್ದು ಕೇಂದ್ರಾಡಳಿತದ ಸಂಘ ಪರಿವಾರದ ಎದುರು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಇದು ರಾಜಕೀಯ ಪ್ರೇರಿತ ದಾಳಿ ಎಂದು ಅವರು ಮಾಧ್ಯಮದೊಡನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Post a Comment

0 Comments