ಕುಂಬಳೆ : ಮಾಜಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಕಿಸಾನ್ ಸೇನೆ ರಾಜ್ಯ ಮತ್ತು ಜಿಲ್ಲಾ ನೇತಾರ ಶುಕ್ಕೂರ್ ಕಾಣಾಜೆ (55) ಅವರ ಮೃತದೇಹ ಅವರ ತರವಾಡು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಂದಿನಂತೆ, ಅವರು ಮಂಗಳವಾರ ಬೆಳಿಗ್ಗೆ ಕಟ್ಟತ್ತಡ್ಕದ ಪುತ್ತಿಗೆಯಲ್ಲಿರುವ ತಮ್ಮ ಮನೆಯಿಂದ ಕಾಣಾಜೆ ತೋಟಕ್ಕೆ ಹೋಗಿದ್ದರು. ಬಹಳ ಸಮಯದವಾದರೂ ಅವರು ಹಿಂತಿರುಗದಿದ್ದಾಗ, ಅವರ ಕುಟುಂಬದವರು ಅವರಿಗೆ ಕರೆ ಮಾಡಿದರು. ಆದರೆ ಯಾವುದೇ ಪ್ರತಿಕ್ರಿಯೆ ಲಭಿಸದಿರುವ ಹಿನ್ನಲೆಯಲ್ಲಿ ಸಂಬಂಧಿಕರು ಕಾಣಾಜೆ ತೋಟದ ಬಳಿಯ ಅವರ ಮನೆಗೆ ತಲುಪಿ ನೋಡಿದಾಗ, ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ತಕ್ಷಣ ಕುಂಬಳೆಯಲ್ಲಿರುವ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವ ಉಳಿಸಲಾಗಲಿಲ್ಲ. ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ.
ಈ ಹಿಂದೆ ಕಾಂಗ್ರೆಸ್ ನೇತಾರರಾಗಿದ್ದ ಅವರು ಪಕ್ಷದೊಳಗಿನ ಬಿನ್ನಾಭಿಪ್ರಾಯದಿಂದ ಪಕ್ಷ ಬಿಟ್ಟು ಸ್ವತಂತ್ರವಾಗಿ ಕಳೆದ ಪಂಚಾಯತ್ ಚುನಾವಣೆಯ ಸಂದರ್ಭ ಅವರು ಮಂಜೇಶ್ವರ ಬ್ಲಾಕ್ ಪಂಚಾಯತ್‌ಗೆ ಸ್ಪರ್ಧಿಸಿ ಸೋತಿದ್ದರು. ಅನೇಕ ರೈತರ ಹೋರಾಟಗಳನ್ನು ಮುನ್ನಡೆಸಿದ್ದ ಶುಕ್ಕೂರ್ ಅವರ ಆತ್ಮಹತ್ಯೆ ಜನತೆಗೆ ಶೋಕ ತರಿಸಿದೆ.

0 Comments