ಬಾಯಾರು : ಕಾಸರಗೋಡು ತಾಲೂಕು ಬಾಯಾರು ಗ್ರಾಮದ ಪೊಸಡಿಗುಂಪೆಯ ಪರ್ವತ ಸಾಲುಗಳ ತಪ್ಪಲಿನಲ್ಲಿ ಆವಳಕಂಪ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಇತಿಹಾಸ ಪ್ರಸಿದ್ಧ ಶ್ರೀ ರಾಮಲಕ್ಷ್ಮಣ ಹಾಗೂ ಕೊರತಿ-ಗುಳಿಗ ಎಂಬ ದೈವಸ್ಥಾನಗಳನ್ನು ಊರ ಪರಊರ ಭಕ್ತಾದಿಗಳ ಸಹಕಾರದಿಂದ ಹೊಸದಾಗಿ ಪುನರ್ ನಿರ್ಮಿಸಲಾಗಿದೆ ಸ್ಥಳ ಪ್ರಶ್ನೆಯಲ್ಲಿ ಕಂಡುಬಂದಂತೆ, ಈ ದೈವಸ್ಥಾನಗಳು ತ್ರೇತಾಯುಗದಲ್ಲೇ ಸ್ಥಾಪನೆಯಾಗಿದ್ದು, ಇಲ್ಲಿ ಆಡಳಿತ ನಡೆಸುತ್ತಿದ್ದ ಜೈನ ಬಲ್ಲಾಳ ರಾಜನು ಆರಾಧನೆ ಮಾಡುತ್ತಿದ್ದ ದೈವಸ್ಥಾನಗಳಲ್ಲೊಂದಾಗಿತ್ತು. ಇಲ್ಲಿರುವ ಕೊರತಿ ದೈವವು ಭಾರತದಾದ್ಯಂತ ಇತರ ಕಡೆಗಳಲ್ಲಿ ಆರಾಧಿಸಲ್ಪಡುವ ದೈವಸ್ಥಾನಗಳಿಗೆ ಆದಿಮೂಲ ದೈವಸ್ಥಾನವಾಗಿರುತ್ತದೆ ಎಂದು ಸಿರಿ ಪಾಡ್ಡನಗಳಿಂದ ಹಾಗೂ ಇತಿಹಾಸದಿಂದ ತಿಳಿದು ಬರುತ್ತದೆ. ಇತರ ಕಡೆಗಳಲ್ಲಿ ದೈವರಾಧನೆಯ ಕೋಲ ನಡೆಯುವಾಗ 'ಆವಳ ಕಂಪದ ಬೂಡು' ಎಂಬುದಾಗಿ ಉಲ್ಲೇಖಿಸುತ್ತಾರೆ. ಕೊರತಿ-ಗುಳಿಗ ದೈವಗಳು ಧರ್ಮ ರಕ್ಷಣೆಗಾಗಿ ಹಾಗೂ ಕೃಷಿ ಸಂಪತ್ತಿನ ರಕ್ಷಣೆಗಾಗಿ ಸೂರ್ಯ-ಚಂದ್ರರಿರುವ ತನಕ ಶಾಶ್ವತವಾಗಿ ಈ ಪ್ರದೇಶದಲ್ಲಿ ನೆಲೆ ನಿಂತಿರುವುದು ಇಲ್ಲಿ ಇತಿಹಾಸ ಸತ್ಯವಾಗಿದೆ. ಸುಮಾರು 38 ವರ್ಷಗಳಿಂದ ಇಲ್ಲಿ ಆರಾಧನೆ ನಡೆದಿರುವುದಿಲ್ಲ. ಇಲ್ಲಿರುವ ಕೊರತಿ ದೈವಕ್ಕೆ ಸಂಕ್ರಮಣದಂದು ಅಮೃತ ಸೇವೆ, ಹರಕೆಯ ಅಗೇಲು ಸೇವೆ ಮಾತ್ರ ನಡೆಯುತ್ತಿತ್ತು. ಇದೀಗ ಜೀರ್ಣೋದ್ಧಾರ ಸಮಿತಿ ರಚಿಸಿ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಶ್ರೀ ರಾಮಲಕ್ಷ್ಮಣ ಕೊರತಿ-ಗುಳಿಗ ದೈವಗಳಿಗೆ ನೂತನವಾಗಿ ನಿರ್ಮಿಸಲಾದ ದೈವಾಲಯಗಳಲ್ಲಿ ಎ.ಕೆ. ಗಣಪತಿ ಭಟ್ ಆವಳ ಕಲ್ಲಡ್ಕ ಹಾಗೂ ವೇದಮೂರ್ತಿ ಶ್ರೀ ಸೂರ್ಯನಾರಾಯಣ ಭಟ್ ಆವಳಮಠ ಇವರ ನೇತೃತ್ವದಲ್ಲಿ ಪುನಃಪ್ರತಿಷ್ಠೆ ಹಾಗೂ ಪ್ರತಿಷ್ಠಾಂಗ ಭಾಗವಾಗಿರುವ ಕಲಶಾಭಿಷೇಕವನ್ನು ನಡೆಸಲಾಗುತ್ತಿದೆ.
ಇದರ ಅಂಗವಾಗಿ ಮೇ 9 ಶನಿವಾರ ಅಪರಾಹ್ನ ಪ್ರಾರ್ಥನೆ, ವಾಸ್ತು ರಾಕ್ಷಘ್ನ ಹೋಮ, ವಾಸ್ತು ಪೂಜೆ ಹಾಗೂ ವಾಸ್ತು ಬಲಿ ಜರಗಲಿದೆ. ಮೇ 10ಕ್ಕೆ ಬೆಳಗ್ಗೆ ಗಂಟೆ 7ರಿಂದ ಗಣಪತಿ ಹೋಮ, ಪ್ರಾರ್ಥನೆ, 7.25 ಕ್ಕೆ ದೈವಗಳ ಪುನಃಪ್ರತಿಷ್ಠೆ ದೈವಗಳ ಮಣೆಮಂಚ ಸ್ಥಾಪನೆ, ಶಿಖರ ಕಲಶ ಸ್ಥಾಪನೆ ಕುಂಭಾಭಿಷೇಕ ಮಧ್ಯಾಹ್ನ ಗಂಟೆ 11ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೆ. ವಿಶ್ವೇಶ್ವರ, ಆವಳ ಕೆದುಕೋಡಿ ಸಭಾಧ್ಯಕ್ಷತೆ ವಹಿಸುವರು. ವಿದ್ವಾನ್ ಶ್ರೀ ವೆಂಕಟೇಶ್ವರ ಭಟ್, ಹಿರಣ್ಯ ಧಾರ್ಮಿಕ ಉಪನ್ಯಾಸಗೈಯುವರು.ಪೈವಳಿಕೆ ಪಂಚಾಯತ್ ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್, ಎಂ. ಗೋವಿಂದ ಭಟ್, ಮೇಲಿನ ಪಂಜ, ಎ.ಕೆ. ನಾರಾಯಣ ಉಪಸ್ಥಿತರಿರುವರು. ಮಧ್ಯಾಹ್ನ 12 ಗಂಟೆಯ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಮೇ 11 ಸೋಮವಾರ ಸಂಜೆ ಗಂಟೆ 5 ರಿಂದ ಕೊರತಿ ಹಾಗೂ ಗುಳಿಗ ದೈವಗಳ ನೇಮೋತ್ಸವದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.

0 Comments