Ticker

6/recent/ticker-posts

Ad Code

ನೀರಿನಲ್ಲಿ ಮುಳುಗಿ ಇಬ್ಬರು ಯುವತಿಯರು ದಾರುಣ ಮೃತ್ಯು : ಪ್ರಾಣಕ್ಕೆ ಕುತ್ತಾದ ಈಜು

 

ಮಂಗಳೂರು : ಹೊಳೆಯಲ್ಲಿ ಈಜುತ್ತಿದ್ದ   ವಿದ್ಯಾರ್ಥಿನಿಯರಿಬ್ಬರು  ನೀರಿನಲ್ಲಿ ಮುಳುಗಿ  ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಡಬದ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಗುಂಡ್ಯಹೊಳೆಯಲ್ಲಿ ಘಟನೆ ನಡೆದಿದೆ. ಕುಟ್ರುಪ್ಪಾಡಿ ನಿವಾಸಿಗಳಾದ ಸುನೀತಾ (21), ಅರ್ಪಿತಾ (15) ಎಂಬ  ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.

ಮೇ 8ರಂದು ಮಧ್ಯಾಹ್ನ ಗೆಳತಿಯರಾದ ಅರ್ಪಿತಾ, ಸುನೀತಾ, ಅಕ್ಷತಾ ಹಾಗೂ ನೆಟ್ಟಣದ ಶ್ರೇಯಾ  ಒಟ್ಟಾಗಿ  ಕೊಲ್ಯದಕಟ್ಟ ಸಮೀಪದ ಗುಂಡ್ಯ ಹೊಳೆಗೆ ಸ್ನಾನಕ್ಕೆ ತೆರಳಿದ್ದರು.  ನದಿಯಲ್ಲಿ ಈಜಾಡುತ್ತಿದ್ದಾಗ, ಅರ್ಪಿತಾ ಮತ್ತು ಸುನೀತಾ ಅಕಸ್ಮಾತ್ತಾಗಿ ನದಿಯ ಆಳವಾದ ಗುಂಡಿಗೆ ಸಿಲುಕಿದ್ದಾರೆ. ಜೊತೆಯಲ್ಲಿದ್ದ ಸ್ನೇಹಿತೆಯರು ಇಬ್ಬರನ್ನೂ ರಕ್ಷಿಸಲು ಪ್ರಯತ್ನಿಸಿದರೂ, ನೀರಿನ ವೇಗ ಮತ್ತು ಆಳಕ್ಕೆ ವಿದ್ಯಾರ್ಥಿನಿಯರು ಅಸಹಾಯಕರಾಗಿ ಮುಳುಗಿದ್ದಾರೆ.

ಘಟನೆಯ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿ ಜಾರ್ಜ್ ಎಂಬವರು ನದಿಯಲ್ಲಿ ತೀವ್ರ ಹುಡುಕಾಟ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಈ ಬಗ್ಗೆ ಅರ್ಪಿತಾ ಅವರ ತಂದೆ ಹರೀಶ್ ಪಿ.ಕೆ. ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.​ ಕುಟ್ರುಪ್ಪಾಡಿ ಭಾಗದ ಈ ನದಿ ಪ್ರದೇಶವು ಹಿಂದಿನಿಂದಲೂ ಅತ್ಯಂತ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆಯ ನೆನಪು ಹಸಿರಾಗಿರುವಾಗಲೇ, ಈಗ ಮತ್ತೊಂದು ದುರಂತ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

Post a Comment

0 Comments