Ticker

6/recent/ticker-posts

Ad Code

ಮಾನವೀಯತೆಯ ಸಂಬಂದ ಮಾರ್ಪನಡ್ಕದಿಂದ ಮರೆಯಾಯಿತೇ..! - ಕ್ಷುಲ್ಲಕ ಕಾರಣ ಕೊಲೆಯಲ್ಲಿ ಅಂತ್ಯ


ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಮಾರ್ಪನಡ್ಕದಲ್ಲಿ ನಡೆದ ಕೊಲೆಯೊಂದು ಇಡೀ ಜಿಲ್ಲೆಯನ್ನೆ ಶೋಕಮುಖವಾಗಿಸಿದೆ.  ಬೆಳ್ಳಂಬೆಳಗ್ಗೆ ಈ ಕೊಲೆಯ ವಿಚಾರ ಕೇಳಿದವರು ಒಮ್ಮೆಲೆ ಗರಬಡಿದಂತಾದರು. ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನ ಮಾರ್ಪನಡ್ಕ ಶಾಖೆಯಲ್ಲಿ ಕಾವಲುಗಾರನಾಗಿದ್ದ ಬೆದ್ರುಕೂಡ್ಲು ನಿವಾಸಿ ಸುರೇಶ್ ಬಿ.ಕೆ(45)ಯನ್ನು ಇಬ್ಬರು ಯುವಕರು ಅಟ್ಟಾಡಿಸಿ ಕೊಂದು ಹಾಕಿರುವುದು ಮಾನವೀಯತೆಯ ಸಂಬಂದ ಮರೆತ ಮಾರ್ಪನಡ್ಕವನ್ನೊಂದು ಮೂಕ ಸಾಕ್ಷಿಯಾಗಿಸಿದೆ.

ಕೊಲೆ ನಡೆಸಿದವರು ಇಬ್ಬರು ಯುವಕರು,ಕೊಲೆಯಾದವನು ಸ್ಥಳೀಯ ಜನಾನುರಾಗಿ ವ್ಯಕ್ತಿ. ಮೂವರು ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರೆ ಆಗಿದ್ದರು. ಆದರೆ ಕೊಲೆಗೆ ಕಾರಣ ಮಾತ್ರ ಕ್ಷುಲ್ಲಕ ಎನ್ನಲಾಗುತ್ತಿದೆ. ನಿನ್ನೆ ಹಗಲು ಈ ಪರಿಸರದಲ್ಲಿ ಜಾತಿ ಸಂಘಟನೆಯ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾಟವೊಂದು ನಡೆದಿದ್ದು ಕೊಲೆ ನಡೆಸಿದವರು ಅಲ್ಲಿಗೆ ತೆರಳಿ ದಾಂಧಲೆ ನಡೆಸಿದ್ದರು ಎನ್ನಲಾಗುತ್ತಿದೆ. ಅಲ್ಲಿ ನಡೆದ ವಾಗ್ವಾದ ಒಂದು ಕೊಲೆಯಲ್ಲಿ ಅಂತ್ಯವಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.ಕನಿಷ್ಟ ಒಂದೆಡೆ ಕೂತು ಚರ್ಚಿಸಿ ಮುಗಿಸಬಹುದಾದ ವಿಷಯ ಇಂದು ಜೀವವೊಂದಕ್ಕೆ ಅಂತ್ಯ ಹಾಡುವ ಮೂಲಕ ಕುಟುಂಬವೊಂದನ್ನು ಅನಾಥವಾಗಿಸಿದೆ. 

ಹಗಲು ಚರ್ಚೆಯ ಸಂದರ್ಭ "ಮತ್ತೆ ನಿನ್ನ ನೋಡಿ ಕೊಳ್ಳುವ " ಎಂಬ ಮಾತು ರಾತ್ರಿಯಾಗುವಾಗ ಕೊಲೆ ನಡೆಸುವಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಏನು ಅರ್ಥವೆಂದು ಜನರಾಡುತ್ತಿದ್ದಾರೆ. ಬಡ ಜೀವವೊಂದನ್ನು ಅಟ್ಟಾಡಿಸಿ ಇರಿದ ಇರಿತ ಯಾವ ದ್ರೋಹಿಯನ್ನು ಈ ರೀತಿಯ ಕೃತ್ಯಕ್ಕೆ ಬಲಿಯಾಗಿಸಲಾರದು. ಪರಸ್ಪರ ಒಂದೇ ಪಕ್ಷದವರು, ಒಂದೇ ಊರಿನವರು ಪ್ರತಿದಿನ ಮುಖ‌ ನೋಡುವವರು ಹೀಗೆ ಅಮಾನವೀಯತೆಯ ಕೃತ್ಯಕ್ಕೆ ಕೈ ಹಾಕಿರುವುದು ಗ್ರಾಮೀಣ ಪ್ರದೇಶವಾದ ಮಾರ್ಪನಡ್ಕವನ್ನು ಶೋಕ ಸಾಗರವಾಗಿಸಿದೆ.

ಮೃತ ಸುರೇಶ್ ಎಷ್ಟೊಂದು ಜನಾನುರಾಗಿ ವ್ಯಕ್ತಿತ್ವ ಎಂಬುದಕ್ಕೆ ಮಾರ್ಪನಡ್ಕದಲ್ಲಿ ಇಂದು ಅವರ ಮೃತದೇಹದ ಅಂತಿಮ ದರ್ಶನಕ್ಕೆ ಸೇರಿದ ಜನಸ್ತೋಮವೇ ಸಾಕ್ಷಿಯಾಗಿದೆ.ಪೇಟೆ ವ್ಯಾಪಾರಿ ಸಮಿತಿ ಅಂಗಡಿ ಮುಚ್ಚಿ ಹಾಗೂ ವಿವಿಧ ಪ್ರಮುಖರು ಇಂದು ಅವರ ಸಾವಿಗೆ ಸಂತಾಪ ಸೂಚಿಸಿದ್ದರು.

Post a Comment

0 Comments