ಬೆಳ್ಳೂರು: ಕೇರಳದಲ್ಲಿ ಕೃಷಿ ನೀರಾವರಿ ಉದ್ದೇಶಗಳಿಗಾಗಿ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸುವಂತೆ ಆಗ್ರಹಿಸಿ ವಿದ್ಯುತ್ ಸಚಿವ ಸನ್ನಿ ಜೋಸೆಫ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಬೆಳ್ಳೂರು ಗ್ರಾ.ಪಂ.ಮಾಜಿ ಅಧ್ಯಕ್ಷ, ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೃಷಿಕ ಕಲ್ಲಗ ಚಂದ್ರಶೇಖರ ರಾವ್ ಅವರು ಜಿಲ್ಲೆಯ ಅಡಕೆ ಬೆಳೆಗಾರರ ತೀವ್ರ ಸಂಕಷ್ಟಗಳನ್ನು ಉಲ್ಲೇಖಿಸಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ಕೇರಳದಲ್ಲಿ 5 ಹೆಕ್ಟೇರ್‌ವರೆಗಿನ ಕೃಷಿ ಭೂಮಿ ಹೊಂದಿರುವ ರೈತರಿಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದನ್ನು 5 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿರುವ ದೊಡ್ಡ ಹಿಡುವಳಿದಾರರಿಗೂ ವಿಸ್ತರಿಸಬೇಕು.
ಕಾಸರಗೋಡು ಜಿಲ್ಲೆಯ ಸುಮಾರು 15,060 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಕೃಷಿ ಇದೆ. ಆದರೆ ಕಳೆದ 3 ವರ್ಷಗಳಿಂದ ಎಲೆ ಚುಕ್ಕೆ ಮತ್ತು ಕೊಳೆ ರೋಗದಿಂದಾಗಿ ಶೇ. 80ರಷ್ಟು ಬೆಳೆ ನಾಶವಾಗಿದ್ದು, ರೈತರು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾರೆ.
ನೆರೆಯ ಕರ್ನಾಟಕ ರಾಜ್ಯದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಈಗಾಗಲೇ ಸಂಪೂರ್ಣ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದೇ ಮಾದರಿಯನ್ನು ಕೇರಳದಲ್ಲೂ ಜಾರಿಗೊಳಿಸಿ ಅರ್ಹರಿಂದ ಹೊಸ ಅರ್ಜಿಗಳನ್ನು ಸ್ವೀಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯಮಗಳ ಪ್ರಕಾರ ಕೃಷಿ ನೀರಾವರಿ ವಿದ್ಯುತ್ ಶುಲ್ಕವನ್ನು ಕೃಷಿ ಭವನಗಳು ಪಾವತಿಸಬೇಕು. ಆದರೆ, ಕೇರಳ ರಾಜ್ಯ ವಿದ್ಯುತ್ ಮಂಡಳಿ ನೇರವಾಗಿ ರೈತರಿಗೆ ನೋಟಿಸ್ ನೀಡುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

0 Comments