ಚಿಕ್ಕೋಡಿ : ಏಳು ವರ್ಷದ ಬಾಲಕನೊಬ್ಬ ಕೃಷ್ಣಾ ನದಿ ದಡದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರಾಯಬಾಗ ತಾಲ್ಲೂಕಿನ ಶಿರಗೂರ ಗ್ರಾಮದ ಸಮೀಪ ನಡೆದಿದೆ. ಶಿರಗೂರದಲ್ಲಿ ತಾಯಿಯೊಂದಿಗೆ ವಾಸವಿದ್ದ ಪ್ರಣವ ಸುನೀಲ ಕಾಂಬಳೆ (7) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. ಪೂಜಾ ಅವರು ಪುತ್ರ ಪ್ರಣವ್ ಜೊತೆಗೆ ಬಟ್ಟೆ ಒಗೆಯಲು ಕೃಷ್ಣಾ ನದಿಗೆ ತೆರಳಿದ್ದರು.
ಈ ವೇಳೆ ಬಾಲಕ ಪ್ರಣವ ನದಿಯ ನೀರಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಆಳವಾದ ನೀರಿಗೆ ಇಳಿದು ಮುಳುಗತೊಡಗಿದ್ದ. ಇದನ್ನು ಕಂಡು ಗಾಬರಿಗೊಂಡ ತಾಯಿ, ಮಗನನ್ನು ಉಳಿಸಲು ತಕ್ಷಣವೇ ನೀರಿಗೆ ಧುಮುಕಿದ್ದರು.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತಾಯಿಯನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಅಷ್ಟರಲ್ಲಾಗಲೇ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸದ್ಯ ಅವರನ್ನು ಕುಡಚಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಾಲಕ ಪ್ರಣವ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರಿಂದ ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿಯಾದ ರಮೇಶ್ ಚಳನ್ನವರ, ನಿಲ್ಲಪ್ಪ ಹೆರವಾಡೆ, ಗೋಪಾಲ ಬನಶಂಕರಿ, ಶಂಕರ್ ಮೂಡಸಿ, ಶಾಹೂ ಕದಂ, ಸುಖಮರ್ ಕಾಣಕಿಕೊಡಿ, ಸುರೇಶ ಹೆಗ್ಗಣ್ಣವರ, ಮುಜುಬ್ ಪಿರಂಜದೆ, ಶ್ರೀನಾಥ್ ಇಂಚಲ್ ಹಾಗೂ ಸುನಿಲ್ ನಾವಿ ಅವರು ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು. ನೀರಿನಲ್ಲಿ ಮುಳುಗಿದ್ದರಿಂದಲೇ ಬಾಲಕ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments