ದಿಸ್ಪುರ್ : ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಅಸ್ಸಾಂನ ಹಲವು ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿವೆ. ರಾಜ್ಯದ ಆರು ಜಿಲ್ಲೆಗಳಲ್ಲಿ 22 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದು, ರೈಲು ಸಂಚಾರಕ್ಕೂ ತೀವ್ರ ಅಡ್ಡಿ ಉಂಟಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಧೇಮಾಜಿ, ನಲ್ಬಾರಿ, ದಿಬ್ರುಗಢ್, ಚಿರಾಂಗ್, ಲಖಿಂಪುರ್ ಹಾಗೂ ಕೊಕ್ರಾಜಾರ್ ಜಿಲ್ಲೆಗಳು ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿದ್ದು, ಧೇಮಾಜಿ ಜಿಲ್ಲೆ ಹೆಚ್ಚು ಹಾನಿಗೊಳಗಾಗಿದೆ.
ಪ್ರವಾಹದ ನೀರು 96 ಗ್ರಾಮಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿದ್ದು, ಸುಮಾರು 1,690 ಹೆಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡಿದೆ. ರೈತರ ಜೀವನಾಧಾರವಾಗಿದ್ದ 48 ಸಾವಿರಕ್ಕೂ ಅಧಿಕ ಜಾನುವಾರುಗಳೂ ಸಂಕಷ್ಟಕ್ಕೆ ಸಿಲುಕಿವೆ.
ಇದೇ ವೇಳೆ ಭಾರೀ ಮಳೆ ಮತ್ತು ನದಿ ದಂಡೆಯ ಸವೆತದಿಂದ ಅರ್ಚಿಪಥರ್–ಸಿಮೆನ್ ಚಾಪರಿ ನಡುವಿನ ರೈಲ್ವೆ ಸೇತುವೆಯ ಪಿಲ್ಲರ್ ದುರ್ಬಲಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಈಶಾನ್ಯ ಗಡಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
1965ರಲ್ಲಿ ನಿರ್ಮಿಸಲಾದ ಈ ಸೇತುವೆಯನ್ನು ನಂತರ ಬ್ರಾಡ್‌ಗೇಜ್ ಮಾರ್ಗಕ್ಕೆ ಪರಿವರ್ತಿಸಲಾಗಿತ್ತು. ಇತ್ತೀಚಿನ ಮಳೆಯಿಂದ ನದಿಯ ದಂಡೆ ಕೊಚ್ಚಿಹೋಗಿದ್ದು, ಸೇತುವೆಯ ಪಿಲ್ಲರ್ ಅಸ್ಥಿರಗೊಂಡಿರುವುದು ಪತ್ತೆಯಾಗಿದೆ. ಅದೃಷ್ಟವಶಾತ್ ಯಾವುದೇ ರೈಲು ಅಪಘಾತ ಸಂಭವಿಸಿಲ್ಲ ಹಾಗೂ ಪ್ರಯಾಣಿಕರಿಗೆ ಹಾನಿಯಾಗಿಲ್ಲ.
ಸದ್ಯ ಮುರ್ಕೋಂಗ್‌ಸೆಲೆಕ್ ಮತ್ತು ಸಿಲಾಪಥರ್ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ರೈಲುಗಳು ಸಿಲಾಪಥರ್ ನಿಲ್ದಾಣದವರೆಗೆ ಮಾತ್ರ ಸಂಚರಿಸುತ್ತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಧೇಮಾಜಿ, ಸಿಲಾಪಥರ್ ಮತ್ತು ಮುರ್ಕೋಂಗ್‌ಸೆಲೆಕ್ ನಿಲ್ದಾಣಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಬ್ರಹ್ಮಪುತ್ರ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶಿವಸಾಗರ್ ಜಿಲ್ಲೆಯ ನಾಂಗ್ಲಾಮುರಘಾಟ್ ಪ್ರದೇಶದಲ್ಲಿ ಡಿಸಾಂಗ್ ನದಿಯ ನೀರಿನ ಮಟ್ಟ ಹೆಚ್ಚಳಗೊಂಡಿದೆ. ಮಳೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಈ ನಡುವೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಸಂತ್ರಸ್ತರಿಗೆ ತಕ್ಷಣದ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರವು ರಕ್ಷಣಾ ಕಾರ್ಯಾಚರಣೆ ಹಾಗೂ ಪುನರ್ವಸತಿ ಕ್ರಮಗಳಿಗೆ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.


0 Comments