ಬೆಂಗಳೂರು : ಖ್ಯಾತ ಪತ್ರಕರ್ತ ಪಿ. ಲಂಕೇಶ್ ಅವರ ಮಡದಿ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶರ ತಾಯಿ ಇಂದಿರಾ ಲಂಕೇಶ್ ( 84) ಇಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇಂದಿರಾ ಲಂಕೇಶ್ ಅವರು ಪುತ್ರಿ ಕವಿತಾ ಲಂಕೇಶ್ ಮತ್ತು ಪುತ್ರ ಇಂದ್ರಜಿತ್ ಲಂಕೇಶ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಪಿ. ಲಂಕೇಶ್ ಅವರಿಗೆ ಇಂದಿರಾ ಲಂಕೇಶ್ ಅವರು ದೊಡ್ಡ ಬೆಂಬಲವಾಗಿ ನಿಂತಿದ್ದರು. ಲಂಕೇಶ್ ಅವರ ನಿಧನದ ನಂತರವೂ ಪತ್ರಿಕೆ ಮುನ್ನಡೆಸುವಲ್ಲಿ ಹಾಗೂ ಲಂಕೇಶ್ ಪ್ರಕಾಶನದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇಂದಿರಾ ಲಂಕೇಶ್ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ವಲಯದ ಅನೇಕ ಗಣ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇಂದಿರಾ ಅವರು ‘ಹುಳಿ ಮಾವು ಮತ್ತು ನಾನು’ ಎಂಬ ಆತ್ಮಕಥನವನ್ನೂ ಬರೆದಿದ್ದರು. ಇಂದಿರಾ ಲಂಕೇಶರ ಅಂತ್ಯಕ್ರಿಯೆಯು ಮಂಗಳವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿರುವ ಸ್ಮಶಾನದಲ್ಲಿ ನೆರವೇರಲಿದೆ ಎಂದು ಅವರ ಪುತ್ರಿ ಕವಿತಾ ಲಂಕೇಶ್ ಮಾಹಿತಿ ನೀಡಿದ್ದಾರೆ.

0 Comments