ಮುಳಿಯಾರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲೂ ಬಿಜೆಪಿಯ ಪ್ರಭಾವ ಗಣನೀಯವಾಗಿ ಹೆಚ್ಚಲಿದ್ದು, ಪಕ್ಷದ ಪ್ರತಿನಿಧಿತ್ವವು ಇಂದಿನ ಮಟ್ಟಕ್ಕಿಂತ ಹಲವು ಪಟ್ಟು ವಿಸ್ತರಿಸಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಳಿಯಾರು ಕ್ಷೇತ್ರ ಸಮಿತಿ ವತಿಯಿಂದ ಆಯೋಜಿಸಿದ್ದ ದ್ವಿದಿನ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸೋಲಿನಿಂದ ಪಾಠ ಕಲಿತು ಮತ್ತಷ್ಟು ಬಲಿಷ್ಠವಾಗಿ ಬೆಳೆಯುವ ರಾಜಕೀಯ ಪರಂಪರೆ ಬಿಜೆಪಿಗಿದೆ ಎಂದರು. ದೇಶ ಮತ್ತು ಸಂಘಟನೆಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವ ಪಕ್ಷ ಬಿಜೆಪಿ ಆಗಿದ್ದು, ವೈಯಕ್ತಿಕ ಹಿತಾಸಕ್ತಿಗಳಿಗೆ ಇಲ್ಲಿ ಸ್ಥಾನವಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಯುಡಿಎಫ್ ಹಾಗೂ ತಿರುವನಂತಪುರ ಕಾರ್ಪೊರೇಷನ್‌ನಲ್ಲಿ ಬಿಜೆಪಿಯ ಆಡಳಿತವನ್ನು ಟೀಕಿಸುತ್ತಿರುವ ಎಲ್‌ಡಿಎಫ್ ಎರಡೂ ಹಲವು ವಿಷಯಗಳಲ್ಲಿ ಒಂದೇ ಧೋರಣೆ ಅನುಸರಿಸುತ್ತಿವೆ ಎಂದು ಅವರು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮುಳಿಯಾರು ಕ್ಷೇತ್ರ ಅಧ್ಯಕ್ಷ ದಿಲೀಪ್ ಪಳ್ಳಂಚಿ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ ಸಿ. ನಾಯಕ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಜಯಕುಮಾರ್ ಮಾನಡ್ಕಂ ಮತ್ತು ಶಶಿಕುಮಾರ್ ಅಮ್ಮಂಗೋಡ್ ಉಪಸ್ಥಿತರಿದ್ದು ಮಾತನಾಡಿದರು.

0 Comments