ಜಾರ್ಖಂಡ್ : ಮೂರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸದೇ, ಆರೋಪಿಗೆ 1 ಲಕ್ಷ ರೂ. ದಂಡ ವಿಧಿಸಿ ಗ್ರಾಮ ಮಟ್ಟದಲ್ಲೇ ಇತ್ಯರ್ಥಪಡಿಸಲು ಯತ್ನಿಸಿದ ಜಾರ್ಖಂಡ್‌ನ ಪಂಚಾಯತ್ ಸದಸ್ಯರ ವಿರುದ್ಧ ಕಾನೂನು ಕ್ರಮ ಆರಂಭವಾಗಿದೆ. ಇನ್ನಷ್ಟು ಆಘಾತಕಾರಿ ಸಂಗತಿಯೆಂದರೆ, ಆರೋಪಿಯಿಂದ ಸಂಗ್ರಹಿಸಿದ ಹಣದಲ್ಲೇ ಪಂಚಾಯತ್ ಸದಸ್ಯರು ಮದ್ಯಪಾರ್ಟಿ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಜಾರ್ಖಂಡ್‌ನ ಗುಂಲಾ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಸುನೀಲ್ ಲೋಹ್ರಾ ಎಂಬಾತ ಮೂರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಪ್ರಕರಣವನ್ನು ಪೊಲೀಸರಿಗೆ ತಿಳಿಸುವ ಬದಲು, ಸರ್ಪಂಚ್ ಸೇರಿದಂತೆ ಪಂಚಾಯತ್ ಸದಸ್ಯರ ಗ್ರಾಮಸಭೆ ಕರೆದು ಆರೋಪಿಗೆ 1ಲಕ್ಷ ರೂ. ದಂಡ ವಿಧಿಸಿದ್ದರು.
ಆರೋಪಿ ತಕ್ಷಣವೇ 20,000ರೂ. ಪಾವತಿಸಿದ್ದು, ಉಳಿದ 80,000ರೂ. ಅನ್ನು ಒಂದು ವಾರದೊಳಗೆ ನೀಡುವುದಾಗಿ ಹೇಳಿದ್ದಾನೆ. ಈ ಹಣವನ್ನು ಬಳಸಿ ಪಂಚಾಯತ್ ಸದಸ್ಯರು ಮದ್ಯ ಹಾಗೂ ಮಾಂಸದ ಔತಣ ಆಯೋಜಿಸಿದ್ದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಘಾಘ್ರಾ ಪೊಲೀಸರು ಬಾಲಕಿಯ ತಾಯಿಯಿಂದ ದೂರು ದಾಖಲಿಸಿಕೊಂಡು ಅತ್ಯಾಚಾರ ಆರೋಪಿಯನ್ನು ಬಂಧಿಸಿದರು. ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಸರ್ಪಂಚ್ ಸೇರಿದಂತೆ ಸಂಬಂಧಪಟ್ಟ ಪಂಚಾಯತ್ ಸದಸ್ಯರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಂಚಾಯತ್ ಸದಸ್ಯರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

0 Comments