ಕಾಸರಗೋಡು : ಜಿಲ್ಲಾಡಳಿತದ ಮಹತ್ವಾಕಾಂಕ್ಷೆಯ ‘ನಮಸ್ತೆ ಕಲೆಕ್ಟರ್’ ಕಾರ್ಯಕ್ರಮದ 13ನೇ ವಾರದಲ್ಲಿ ಚೆರ್ಕಳ ಸರ್ಕಾರಿ ಮುಸ್ಲಿಂ ಯುಪಿ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ, ಜಿಲ್ಲಾಧಿಕಾರಿಯೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿದರು.
ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಹೊಸ ಕಟ್ಟಡದ ಅಗತ್ಯವಿರುವುದಾಗಿ ಜಿಲ್ಲಾಧಿಕಾರಿಯ ಗಮನಕ್ಕೆ ತಂದರು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಸಂವಾದದ ಅಂತ್ಯದಲ್ಲಿ, "ನಮ್ಮ ಶಾಲೆಗೆ ಒಮ್ಮೆ ಭೇಟಿ ನೀಡಿ" ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯನ್ನು ಆಹ್ವಾನಿಸಿದ್ದು, ಆಹ್ವಾನವನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಆದಿನಾಥ್ ಬಿಡಿಸಿದ್ದ ಜಿಲ್ಲಾಧಿಕಾರಿಯ ಭಾವಚಿತ್ರ ಹಾಗೂ ವಿದ್ಯಾರ್ಥಿ ಶೈಸಾನ್ ತಯಾರಿಸಿದ ಪೆನ್ ಬಾಕ್ಸ್ ಅನ್ನು ಜಿಲ್ಲಾಧಿಕಾರಿಗೆ ಸ್ಮರಣಿಕೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಚಾಕೊಲೇಟ್ ವಿತರಿಸಿ, ಭಾಗವಹಿಸಿದ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.
ಚೆರ್ಕಳ ಜಿಎಂಯುಪಿ ಶಾಲೆಯ 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಶಿಕ್ಷಕರ ನೇತೃತ್ವದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0 Comments