ಕಾಸರಗೋಡು : ಕೇರಳದ ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸುವ ಸರಣಿಗೆ ಕಾಸರಗೋಡಿನಿಂದಲೇ ಚಾಲನೆ ನೀಡಿರುವುದು ವಿಶೇಷವಾಗಿದೆ. ಸಭೆಯಲ್ಲಿ ಕಂದಾಯ ಕಾರ್ಯದರ್ಶಿ, ಭೂ ಕಂದಾಯ ಆಯುಕ್ತ, ಸರ್ವೇ ನಿರ್ದೇಶಕ, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲೆಯಲ್ಲಿನ ಭೂ ಸಮಸ್ಯೆಗಳು, ಪಟ್ಟಾ ವಿತರಣೆಗೆ ಸಂಬಂಧಿಸಿದ ವಿಚಾರಗಳು, ಗ್ರೂಪ್ ವಿಲೇಜ್ ಸಮಸ್ಯೆಗಳು, ಪರಿಶಿಷ್ಟ ಪಂಗಡ ಪ್ರದೇಶಗಳಲ್ಲಿ ಯಶಸ್ವಿಯಾಗಿ ಜಾರಿಯಲ್ಲಿರುವ ‘ಆಪರೇಷನ್ ಸ್ಮೈಲ್’ ಯೋಜನೆ, ಹಾಗು ಡಿಜಿಟಲ್ ಸರ್ವೇ ಮತ್ತು ಮರುಸರ್ವೇ ಕಾರ್ಯಗಳ ಪ್ರಗತಿ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ), ಆರ್‌ಡಿಒ, ಉಪ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಉಪ ತಹಶೀಲ್ದಾರರು ಸೇರಿದಂತೆ ವಿವಿಧ ಹಂತದ ಕಂದಾಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ಸಚಿವ ಎ.ಪಿ. ಅನಿಲ್ ಕುಮಾರ್ ಅವರು ಆನ್‌ಲೈನ್ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮಾಧಿಕಾರಿಗಳನ್ನುಉದ್ದೇಶಿಸಿ ಮಾತನಾಡಿ, ಸಾರ್ವಜನಿಕರಿಗೆ ತ್ವರಿತ ಹಾಗೂ ಜನಸ್ನೇಹಿ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

0 Comments