ಕಾಸರಗೋಡು : ಆಪರೇಷನ್ ತೂಫಾನ್ ಜನ ಜಾಗೃತಿ ಸಮಾರಂಭ ಸಹಿತ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಕೇರಳ ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಉಜ್ವಲ ಸ್ಚಾಗತ ನೀಡಲಾಯಿತು. ಬಳಿಕ ವಿದ್ಯಾನಗರದ ತನ್ನೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜಿಲ್ಲಾ ಪೋಲಿಸ್ ನೇತೃತ್ವದಲ್ಲಿ ನಡೆದ ಆಪರೇಷನ್ ತೂಫಾನ್ ಜನ ಜಾಗೃತಿ ಸಮಾರಂಭ ಉದ್ಘಾಟಿಸಿದ ಸಚಿವರು ಮಾದಕ ದ್ರವ್ಯ ದಂಧೆ ನಮ್ಮ ರಾಜ್ಯದಲ್ಲಿ ಯುವ ಪೀಳಿಗೆಯನ್ನು ವಿನಾಶದತ್ತ ಕೊಂಡೊಯ್ಯುವ ಸ್ಥಿತಿಯಲ್ಲಿತ್ತು. ಅನೇಕ ಮನೆಗಳ ಅಮ್ಮಂದಿರ ಕಣ್ಣೀರು, ಕುಟುಂಬದ ಛಿದ್ರತೆ ನಾನು ಗಮನಿಸಿದ್ದೇನೆ. ಈ ನಿಟ್ಟಿನಲ್ಲಿ ಆರಂಭಿಸಿದ ಆಪರೇಷನ್ ತೂಫಾನ್ ಅತ್ಯಂತ ಯಶಸ್ವಿಯಾಗಿದೆ.
ಕಾಸರಗೋಡು ಜಿಲ್ಲೆ ಕರ್ನಾಟಕದೊಂದಿಗೆ ಗಡಿ ಹಂಚುತ್ತಿದೆ. ಆದ್ದರಿಂದ ಕರ್ನಾಟಕ ಪೊಲೀಸ್ ಸಹಕಾರದೊಂದಿಗೆ ತಲಪ್ಪಾಡಿ ಸಹಿತ ಗಡಿಯಲ್ಲಿ ಕಣ್ಗಾವಲಿರಿಸಲಾಗಿದೆ. ಈ ನಿಟ್ಟಿನಲ್ಲಿ ತಾನು ಕರ್ನಾಟಕ ಸಿಎಂ ಜತೆ ಮಾತುಕತೆ ನಡೆಸಿದ್ದೇನೆಂದು ಗೃಹ ಸಚಿವರು ನುಡಿದರು. ತೂಫಾನ್ ಜಾಗರಣ್ ಸಭೆಯಲ್ಲಿ ನೆರೆದವರಿಗೆ ಮಾದಕ ದ್ರವ್ಯ ಸೇವನೆ ವಿರುದ್ದ ಪ್ರತಿಜ್ಞೆ ಬೋಧಿಸಲಾಯಿತು. ಸಂಸದ ರಾಜ ಮೋಹನ್ ಉಣ್ಣಿತ್ತಾನ್ ಪ್ರತಿಜ್ಞೆ ಬೋಧಿಸಿದರು.
ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪೋಲೀಸ್ ವರಿಷ್ಠ ನಿತಿನ್ ರಾಜ್ ಐಪಿಎಸ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ಡಿಐಜಿ ಕಾರ್ತಿಕ್ ಐಪಿಎಸ್, ಶಾಸಕರಾದ ಎಕೆಎಂ ಅಶ್ರಫ್, ಕೆ ನೀಲಕಂಠನ್, ಗೋವಿಂದನ್ ಪಳ್ಳಿಕಾಪಿಲ್, ಸಂದೀಪ್ ವಾರಿಯರ್, ಜಿ. ಪಂ. ಅಧ್ಯಕ್ಷ ಸಾಬು ಅಬ್ರಹಾಂ, ಬ್ಲಾಕ್ ಪಂ. ಅಧ್ಯಕ್ಷ ಅಬ್ದುಲ್ ಕುಂಞಿ ಚೆರ್ಕಳ, ಮೊದಲಾದವರಿದ್ದರು.
ಬಳಿಕ ಸಚಿವರು ಎಡನೀರು ಮಠ ಸಂದರ್ಶಿಸಿದರು. ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳ ಜತೆ ಕಾಸರಗೋಡು ಮುನ್ಸಿಪಾಲ್ ಸಭಾಂಗಣದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ ಜಿಲ್ಲಾ ಸಮಿತಿ ಆಯೋಜಿಸಿದ ಮಾಜಿ ಸಚಿವ, ಶಾಸಕ ದಿ.ಚೆರ್ಕಳಂ ಅಬ್ದುಲ್ಲ ಅವರ 8ನೇ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

0 Comments