ಕೋಝಿಕ್ಕೋಡ್ : ರಾಮನಾಟುಕರ ಸಮೀಪದ ಮುಟ್ಟಿಯಾರದಲ್ಲಿ ಚಾಳಿಯಾರ್ ನದಿಯ ಉಪನದಿಗೆ ವಿಷ ಬೆರೆಸಿ ಅಕ್ರಮವಾಗಿ ಮೀನು ಹಿಡಿಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ವಿಷದ ಪರಿಣಾಮ ನೂರಾರು ಮೀನುಗಳು ಸತ್ತು ನೀರಿನ ಮೇಲ್ಮೈಗೆ ತೇಲಿ ಬಂದಿವೆ.
ಮೂರು ಮಂದಿ ನದಿಗೆ ವಿಷ ಬೆರೆಸಿ ಬಲೆ ಬೀಸಿ ಮೀನು ಹಿಡಿಯುತ್ತಿದ್ದ ವೇಳೆ ಸ್ಥಳೀಯರು ಗಮನಿಸಿದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರು ಬಂದಿದ್ದ ಆಟೋವನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದು, ವಿಷದ ಬಾಟಲಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರು ಕುಡಿಯಲು, ಬಟ್ಟೆ ತೊಳೆಯಲು ಹಾಗೂ ಇತರೆ ದೈನಂದಿನ ಅಗತ್ಯಗಳಿಗೆ ಬಳಸುವ ನೀರಿನಲ್ಲೇ ವಿಷ ಬೆರೆಸಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪರಿಸರ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡಿದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

0 Comments