Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

15 ದಾಖಲೆ ಸಲ್ಲಿಸಿದರೂ ಸಾಬೀತಾಗದ ಭಾರತೀಯ ನಾಗರಿಕತ್ವ : ದಿನಗೂಲಿ ಕಾರ್ಮಿಕನ ಮೇಲ್ಮನವಿ ತಿರಸ್ಕಾರ

ಗುವಾಹಟಿ : ಪೂರ್ವಜರ ಹೆಸರುಗಳಿರುವ ಮತದಾರರ ಪಟ್ಟಿ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಶಾಲಾ ಪ್ರಮಾಣಪತ್ರ ಸೇರಿದಂತೆ 15 ದಾಖಲೆಗಳನ್ನು ಸಲ್ಲಿಸಿದ್ದರೂ ಅಸ್ಸಾಂನ ದಿನಗೂಲಿ ಕಾರ್ಮಿಕನೊಬ್ಬ ಭಾರತೀಯ ನಾಗರಿಕತ್ವವನ್ನು ಸಾಬೀತುಪಡಿಸಲು ವಿಫಲನಾಗಿದ್ದು, ಗುವಾಹಟಿ ಹೈಕೋರ್ಟ್ ಅವನ ಮೇಲ್ಮನವಿಯನ್ನು ತಿರಸ್ಕರಿಸಿದೆ.

ನಾಗರಿಕತ್ವ ಸಾಬೀತುಪಡಿಸಲು ಅರ್ಜಿದಾರನು 1951ರ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ದಾಖಲೆ, 1966ರಿಂದ 2017ರವರೆಗಿನ ವಿವಿಧ ಮತದಾರರ ಪಟ್ಟಿಗಳು, 1973ರ ಭೂ ಖರೀದಿ ದಾಖಲೆ, ಶಾಲಾ ಪ್ರಮಾಣಪತ್ರ, ಪ್ಯಾನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ 15 ದಾಖಲೆಗಳನ್ನು ವಿದೇಶಿ ನ್ಯಾಯಾಧಿಕರಣಕ್ಕೆ ಸಲ್ಲಿಸಿದ್ದ.

ತನ್ನ ಕುಟುಂಬವು ನದಿಯ ಪ್ರವಾಹ ಹಾಗೂ ಭೂಕೊರೆತದಿಂದ ಹಲವು ಬಾರಿ ಗ್ರಾಮ ಬದಲಾಯಿಸಬೇಕಾಯಿತು ಎಂದು ಆತ ವಿವರಿಸಿದ್ದ. ಚರಾಯಿ ಖಾಸ್ರಾ, ಧೋಬುಕುರಾ, ಘುಗುಡೋಬಾ ಮತ್ತು ಹಶ್ದೋಬಾ ಗ್ರಾಮಗಳಲ್ಲಿ ವಿವಿಧ ಅವಧಿಯಲ್ಲಿ ವಾಸವಿದ್ದುದಾಗಿ ಹೇಳಿದ್ದು, ತನ್ನ ತಂದೆಯ ಸಾಕ್ಷ್ಯವನ್ನೂ ನ್ಯಾಯಾಲಯದ ಮುಂದೆ ಮಂಡಿಸಿದ್ದ.

ಆದರೆ, 1951ರ ಎನ್‌ಆರ್‌ಸಿ ದಾಖಲೆಯು ಪ್ರಮಾಣೀಕೃತ ಪ್ರತಿಯಾಗಿರದೆ ಕಂಪ್ಯೂಟರ್ ಪ್ರಿಂಟ್ ಮಾತ್ರವಾಗಿರುವುದರಿಂದ ಅದನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿತು. ಅಲ್ಲದೆ, ಜನಗಣತಿ ಕಾಯ್ದೆಯ ಪ್ರಕಾರ ಜನಗಣತಿ ದಾಖಲೆಗಳು ಮಾತ್ರ ನಾಗರಿಕತ್ವದ ನಿರ್ಣಾಯಕ ಸಾಕ್ಷ್ಯವಾಗುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿತು.

ಶಾಲಾ ಪ್ರಮಾಣಪತ್ರಕ್ಕೂ ಅಗತ್ಯ ದೃಢೀಕರಣದ ಕೊರತೆಯಿದ್ದ ಕಾರಣ ಅದನ್ನು ಅಂಗೀಕರಿಸಲಾಗಲಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರನ್ನು ಸಾಕ್ಷಿಯಾಗಿ ಹಾಜರುಪಡಿಸದಿರುವುದು ಹಾಗೂ ಪ್ರವೇಶ ನೋಂದಣಿ ಸಲ್ಲಿಸದಿರುವುದನ್ನು ನ್ಯಾಯಾಲಯ ಗಮನಿಸಿತು. 1973ರ ಭೂ ಖರೀದಿ ದಾಖಲೆಯೂ ಅರ್ಜಿದಾರನ ಕುಟುಂಬಕ್ಕೆ ಕಾನೂನುಬದ್ಧವಾಗಿ ಸಂಬಂಧ ಹೊಂದಿರುವುದನ್ನು ಸಾಬೀತುಪಡಿಸಲಿಲ್ಲ.

ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳು ಕೇವಲ ಗುರುತಿನ ದಾಖಲೆಗಳಾಗಿದ್ದು, ಅವು ಭಾರತೀಯ ನಾಗರಿಕತ್ವದ ಅಂತಿಮ ಪುರಾವೆಗಳಲ್ಲ ಎಂದು ನ್ಯಾಯಾಲಯ ಹೇಳಿದೆ. ವಿವಿಧ ವರ್ಷಗಳ ಮತದಾರರ ಪಟ್ಟಿಗಳಲ್ಲೂ ಕುಟುಂಬ ಸದಸ್ಯರ ವಯಸ್ಸು ಮತ್ತು ವಿಳಾಸಗಳಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದ್ದು, ದಾಖಲೆಗಳ ನಡುವಿನ ನಿರಂತರ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನಾಗರಿಕತ್ವ ಸಾಬೀತುಪಡಿಸುವ ಹೊಣೆಗಾರಿಕೆ ಅರ್ಜಿದಾರನದ್ದೇ ಆಗಿದ್ದು, ಕೇವಲ ದಾಖಲೆಗಳನ್ನು ಸಲ್ಲಿಸುವುದಷ್ಟೇ ಸಾಕಾಗುವುದಿಲ್ಲ. ಅವು ಕಾನೂನುಬದ್ಧವಾಗಿ ಮಾನ್ಯವಾಗಿರುವುದರ ಜೊತೆಗೆ, ಪೂರ್ವಜರೊಂದಿಗೆ ಇರುವ ಸಂಬಂಧವನ್ನು ಸ್ಪಷ್ಟವಾಗಿ ಸಾಬೀತುಪಡಿಸಬೇಕೆಂದು ಗುವಾಹಟಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಒತ್ತಿ ಹೇಳಿದೆ. ನ್ಯಾ. ಕಲ್ಯಾಣ್ ರಾಯ್ ಮತ್ತು ನ್ಯಾ.ಶಮೀಮಾ ಅವರ  ದ್ವಿಸದಸ್ಯ ಪೀಠವು, ಅರ್ಜಿದಾರರು ಸಲ್ಲಿಸಿರುವ ಯಾವುದೇ ದಾಖಲೆಗಳು, ಅವರು ಹೇಳಿಕೊಳ್ಳುತ್ತಿರುವ ವಂಶಾವಳಿಯೊಂದಿಗೆ (Family Tree) ಸರಿಯಾಗಿ ತಾಳೆಯಾಗುತ್ತಿಲ್ಲ. ಅರ್ಜಿದಾರರು ವಿದೇಶಿಯರ ಕಾಯ್ದೆ 1946ರ ಸೆಕ್ಷನ್ 9ರ ಅಡಿಯಲ್ಲಿ ತಾನು, ವಿದೇಶಿಗನಲ್ಲ, ಭಾರತೀಯ ನಾಗರಿಕ ಎಂದು ನಿರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು  ತಿಳಿಸಿದೆ.

Post a Comment

0 Comments

ಜಾಹೀರಾತು

Responsive Advertisement